ರಿಪ್ಪನ್‌ಪೇಟೆ ಸಮೀಪದ ಹೊಂಬಜು ಜೈನಮಠದಲ್ಲಿ ಶ್ರೀ ಪದ್ಮಾವತಿ ದೇವಿಗೆ ವಿಶೇಷ ಸ್ವರ್ಣಲಂಕಾರ.  
ಜಿಲ್ಲೆ

ಸಮೃದ್ಧಿ, ಶಾಂತಿಗಾಗಿ ಹೊಂಬುಜ ಶ್ರೀ ಪ್ರಾರ್ಥನೆ

Shivamogga - Desk - Vinayakumar D B

ರಿಪ್ಪನ್‌ಪೇಟೆ: ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಪೂಜೆಯಿಂದ ಸರ್ವರಿಗೂ ಸಮೃದ್ಧಿ, ಸುಖ-ಶಾಂತಿ ಪ್ರಾಪ್ತಿಯಾಗಲಿ ಎಂದು ಹೊಂಬುಜ ಜೈನಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಭಕ್ತರನ್ನು ಹರಸಿದರು.

ಸಮೀಪದ ಹೊಂಬುಜ ಜೈನಮಠದಲ್ಲಿ ಶ್ರೀ ವರಮಹಾಲಕ್ಷ್ಮೀ ದೇವಿ ಆರಾಧನೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಸ್ವ ದುಡಿಮೆಯಿಂದ ಪ್ರತಿಯೊಬ್ಬ ವ್ಯಕ್ತಿಯ ಧನ-ಕನಕ-ಸಂಪತ್ತು ವರ್ಧಿಸಲಿ. ಗಳಿಸಿಕೊಂಡ ಸಂಪತ್ತಿನಲ್ಲಿ ಒಂದು ಭಾಗ ಸಮಾಜ ಸೇವೆಗೆ, ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟು ಜೀವನವನ್ನು ಪಾವನವಾಗಿಸಿಕೊಂಡು ಮುಂದಿನ ಪೀಳಿಗೆ ನಿಮ್ಮ ಸದಾಚಾರಗಳನ್ನೇ ಅನುಕರಣೆ ಮಾಡಿ. ಸಮಾಜ ಸಂಪದ್ಭರಿತವಾಗಿಲಿ. ಜಗನ್ಮಾತೆ ಪದ್ಮಾವತಿ ದೇವಿಸಕಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಶ್ರೀ ಪದ್ಮಾವತಿ ದೇವಿ ಆರಾಧಕರು ಭಕ್ತಿ, ಶ್ರದ್ಧೆಯಿಂದ ಕಾಣಿಕೆಗಳನ್ನು ಸಮರ್ಪಿಸಿ, ಉತ್ತಮ ಬೆಳೆ, ಮಳೆಗಾಗಿ ಪ್ರಾರ್ಥಿಸಿದರು. ಶ್ರೀ ಪದ್ಮಾವತಿ ದೇವಿಗೆ ವಿಶೇಷ ಸ್ವರ್ಣಲಂಕಾರವನ್ನು ಮಾಡಲಾಗಿತ್ತು. ಅಷ್ಟವಿಧಾರ್ಚನೆ ಪೂಜೆಯ ಬಳಿಕ ಭಕ್ತರು ವಿವಿಧ ಹರಕೆ ಪೂಜೆ ಸಲ್ಲಿಸಿದರು. ಅಭೀಷ್ಠವರ ಪ್ರಸಾದದಾಯಿನಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ 108 ವೈವಿಧ್ಯಮಯ ಸಾಂಪ್ರದಾಯಕ ಶರ್ಕರ ನೈವೇದ್ಯಗಳನ್ನು ಅರ್ಪಿಸಲಾಯಿತು. ಸರ್ವಾಲಂಕಾರ ಮಹಾಪೂಜೆಯಲ್ಲಿ ಆಗಮಿಸಿದ ಭಕ್ತರು ಜಿನನಾಗಮವನ್ನು ಪಠಿಸಿದರು.