ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನವರಾತ್ರಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಳೆದ ವರ್ಷ ಮಳೆಬಾರದೆ ತೀವ್ರ ಬರಗಾಲ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ನಿರಾಯಾಸವಾಗಿ ಆಚರಿಸಿದ್ದರು.
ಆದರೆ ಈ ಬಾರಿ ಸಕಾಲದಲ್ಲಿ ಉತ್ತಮ ಮಳೆಯಾಗಿ ರೈತರ ಫಸಲು ಅತ್ಯಂತ ಸಮೃದ್ಧವಾಗಿದ್ದು, ಈಗಾಗಲೇ ಜೋಳ-ಮೆಕ್ಕೆಜೋಳ ಬೆಳೆ ಬಹುತೇಕ ರೈತರ ಕೈ ಸೇರಿದೆ. ಉಳಿದಂತೆ ಶೇಂಗಾ ಬೆಳೆ ಉತ್ತವಾಗಿದ್ದು, ರೈತರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ.
ಇದರಿಂದ ಸಹಜವಾಗಿ ದಸರಾ ಹಬ್ಬವನ್ನು ಅತ್ಯಂತ ಹೆಚ್ಚು ಖುಷಿಯಿಂದ ಆಚರಣೆ ಮಾಡಿದ್ದು, ಶುಕ್ರವಾರ ಆಯುಧ ಪೂಜೆ ಅಂಗವಾಗಿ ರೈತರು ತಮ್ಮ ಕೃಷಿ ಚಟುವಟಿಕೆಯ ಎಲ್ಲಾ ಪರಿಕರಗಳನ್ನು ಪೂಜೆ ಮಾಡಿದರು. ಟ್ರ್ಯಾಕ್ಟರ್, ಕಾರ್, ಜೀಪ್, ಲಾರಿ, ಬೈಕ್ ಸೇರಿದಂತೆ ಎಲ್ಲಾ ವಾಹನಗಳನ್ನು ಪೂಜೆ ಮಾಡಿ, ಕುಂಬಳಕಾಯಿ ಒಡೆದರು.
ಇನ್ನೂ ವಿಜಯ ದಶಮಿ ದಿನವಾದ ಶನಿವಾರ ಬೆಳಗ್ಗೆ ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಶಮಿ ವೃಕ್ಷಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ರೈತರು ತಮ್ಮ ಹೊಲಗಳಲ್ಲಿನ ಬನ್ನಿ ಮರಕ್ಕೆ ಹೊಸ ಸೀರೆ ಏರಿಸಿ, ಭಕ್ತಿಯಿಂದ ಪೂಜೆ ಮಾಡಿ, ಹೋಳಿಗೆ ನೈವೇದ್ಯ ಮಾಡಿದರು. ನಂತರ ಮನೆಗಳಲ್ಲಿ ಸಾಮೂಹಿಕವಾಗಿ ಭೋಜನಮಾಡಿದರು. ನಂತರ ಸಂಜೆ ಬನ್ನಿಮರಕ್ಕೆ ತೆರಳಿ ಪೂಜೆ ಮಾಡಿ ಪರಸ್ಪರ ಬನ್ನಿ ಮುಡಿದರು.