ಮಲೆಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ 386 ಕೊಠಡಿಗಳ ಕಟ್ಟಡದಲ್ಲಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹೋಮ ನೆರವೇರಿಸಲಾಯಿತು. ಎ.ಈ ರಘು, ಚಂದ್ರಶೇಖರ್, ಕರವೀರಸ್ವಾಮಿ, ಮಹದೇವಸ್ವಾಮಿ ಇತರರು ಇದ್ದರು.  
ಜಿಲ್ಲೆ

ನೂತನ ಕಟ್ಟಡದಲ್ಲಿ ಸಾಲೂರು ಶ್ರೀಗಳಿಂದ ಹೋಮ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 386 ಕೊಠಡಿಗಳ ಕಟ್ಟಡದಲ್ಲಿ ಸೋಮವಾರ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಹೋಮ, ಹವನ ನೆರವೇರಿಸಲಾಯಿತು.

ಐದಾರು ವರ್ಷಗಳ ಹಿಂದೆ 512 ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಕಾರಣಾಂತರದಿಂದ ನನೆಗುದಿಗೆ ಬಿದ್ದಿತ್ತು. ಬಳಿಕ ಕೈಗೊಂಡ 2ನೇ ಹಂತದ ಕಾಮಗಾರಿಯಲ್ಲಿ ಉದ್ದೇಶಿತ 512 ಕೊಠಡಿಗಳ ಬದಲಿಗೆ 386 ಕೊಠಡಿಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು. ಇದೀಗ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೋಮ, ಹವನ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ಮೊದಲಿಗೆ ಮಾದಪ್ಪನ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗಣಪತಿ ಪೂಜೆ, ಸ್ವಾಸ್ಥ ಪುಣ್ಯಾಹ, ನಾಂದಿಪೂಜೆ, ಪಂಚಕಳಸ ಪೂಜೆ, ನವಗ್ರಹ ಪೂಜೆ, ದಿಕ್ಪಾಲಕ ಪೂಜೆ ನೆರವೇರಿಸಲಾಯಿತು. ಗಣ್ಯ ಹೋಮ, ರುದ್ರಹೋಮ ಹಾಗೂ ವಾಸ್ತು ಹೋಮದೊಂದಿಗೆ ಪೂರ್ಣಾಹುತಿ ನಡೆಸಲಾಯಿತು.

ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ. ಇಲ್ಲಿಗೆ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಆಗಮಿಸುವ ಭಕ್ತರಿಗೆ ವಾಸ್ತವ್ಯ ಹೂಡಲು ಅನುಕೂಲ ಕಲ್ಪಿಸುವ ಸಲುವಾಗಿ ಪ್ರಾಧಿಕಾರ ವತಿಯಿಂದ ಸುಸಜ್ಜಿತವಾದ ವಸತಿ ಕೊಠಡಿಗಳ ಕಟ್ಟಡವನ್ನು ನಿರ್ಮಿಸಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಪಾರುಪತ್ತೆಗಾರ ಮಹಾದೇವಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಪ್ರಾಧಿಕಾರದ ನೌಕರರು ಇದ್ದರು.