ಜಿಲ್ಲೆ

ಹಾಲಿ, ಮಾಜಿ ಸಚಿವರ ನಡುವೆ ಗುದ್ದಾಟ!

ರೋಣ: ನೆರೆ ಪ್ರವಾಹದಿಂದ ಮನೆ ಕಳೆದುಕೊಂಡ ತಾಲೂಕಿನ ಗಾಡಗೋಳಿ ಗ್ರಾಮದ ನಿರಾಶ್ರಿತರು ನವ ಗ್ರಾಮದಲ್ಲಿ ನಿರ್ವಿುಸಲಾಗಿರುವ ಮನೆ ಹಕ್ಕು ಪತ್ರ ಪಡೆಯಲು ಎರಡು ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಪರಿಹಾರ ಕಲ್ಪಿಸಬೇಕಿದ್ದ ನರಗುಂದ ವಿಧಾನಸಭಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

2007 ಮತ್ತು 2009ರಲ್ಲಿ ನೆರೆ ಪ್ರವಾಹ ಬಂದು ತಾಲೂಕಿನ ಗಾಡಗೋಳಿ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. 2009 ರಲ್ಲಿ ಅಂದಿನ ಸರ್ಕಾರ ಗೊಡಗೋಳಿ ಗ್ರಾಮವನ್ನು ನವ ಗ್ರಾಮಕ್ಕೆ ಸ್ಥಳಾಂತರಗೊಳಿಸಿ ಆಸರೆ ಮನೆಗಳನ್ನು ನಿರ್ವಿುಸಿತ್ತು. ಈ ಬಗ್ಗೆ ಗ್ರಾಪಂನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಅಲ್ಲಿನ ನಿವಾಸಿಗಳಿಗೆ ಈವರೆಗೂ ಹಕ್ಕುಪತ್ರಗಳನ್ನು ವಿತರಿಸಿಲ್ಲ.

ಹೀಗಾಗಿ, ನಿರಾಶ್ರಿತರು ಮಾ.11 ರಂದು ತಲೆಯ ಮೇಲೆ ಕಲ್ಲು ಹೊತ್ತು ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸಿದ್ದರು. ಧರಣಿ ಸ್ಥಳಕ್ಕೆ ಮಾಜಿ ಸಚಿವ ಬಿ.ಆರ್. ಯಾವಗಲ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ತಲೆಯ ಮೇಲಿನ ಕಲ್ಲು ಇಳಿಸಿದ್ದರು. ಸ್ಥಳಕ್ಕೆ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರನ್ನು ಕರೆಯಿಸಿ ಮಾ.25ರೊಳಗೆ ಹಕ್ಕುಪತ್ರ ವಿತರಿಸಬೇಕು. ಇಲ್ಲದಿದ್ದರೆ ಆಮರಣ ಉಪವಾಸ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಬಿ.ಆರ್. ಯಾವಗಲ್ ಭೇಟಿ ನೀಡಿದ ಸುದ್ದಿ ತಿಳಿಯುತ್ತಿದ್ದಂತೆ ಕೆಂಡಾಮಂಡಲರಾದ ಸಚಿವ ಸಿ.ಸಿ. ಪಾಟೀಲ, ‘2009ರಲ್ಲಿ ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಲ್ಲಿನ ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇವೆ. 2013 ರಿಂದ 2018 ರವರೆಗೆ ಇವರೆ ಶಾಸಕರಿದ್ದು, ಇವರದೆ ಪಕ್ಷ ಅಧಿಕಾರದಲ್ಲಿತ್ತು. ಒಂದು ದಿನವೂ ಸೌಜನ್ಯಕ್ಕೂ ನಿರಾಶ್ರಿತರ ಗ್ರಾಮವನ್ನು ಕಣ್ಣೆತ್ತಿ ನೋಡಲಿಲ್ಲ. ನಿರಾಶ್ರಿತರು ನವಗ್ರಾಮಕ್ಕೆ ಬರದಂತೆ ಮಾಡಿ ಎಲ್ಲ ಮನೆಗಳನ್ನು ಹಾಳು ಬೀಳುವಂತೆ ಮಾಡಿದರು. ಇದೀಗ ಜಿಪಂ, ತಾಪಂ ಚುನಾವಣೆ ಸಮೀಪಿಸುತ್ತಿರುವುದರಿಂದ ನಿರಾಶ್ರಿತರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ತಾಕತ್ತಿದ್ದರೆ ಒಂದು ಕೊಡ ನೀರು ತಂದು ಸ್ನಾನ ಮಾಡಬೇಕು. ಅದನ್ನು ಬಿಟ್ಟು ನೀರು ತಂದು ಜಳಕ ಮಾಡುವವರ ಕೆಳಗೆ ಬಗ್ಗಿ ಮೈತೊಳೆದುಕೊಳ್ಳಬಾರದು’ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಹೊಳೆಆಲೂರಿನ ಯಚ್ಚಿರಪ್ಪನ ಮೇಲೆ ಆಣೆ ಮಾಡಿ ಹೇಳುತ್ತೇನೆ ಬಜೆಟ್ ಅಧಿವೇಶನ ಮಗಿದ ಬಳಿಕ ಏಪ್ರಿಲ್ ಮೊದಲ ವಾರದಲ್ಲಿ ಗಾಡಗೋಳಿ ನವ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಎಲ್ಲ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುತ್ತೇನೆ. | ಸಿ.ಸಿ. ಪಾಟೀಲ, ಸಚಿವ
ಮಾ.25ರೊಳಗೆ ಹಕ್ಕುಪತ್ರ ವಿತರಿಸದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಆಮರಣ ಉಪವಾಸ ಕೈಗೊಳ್ಳುವುದಾಗಿ ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳ್ಯಾರ. ಸಿ.ಸಿ. ಪಾಟೀಲರು ಏಪ್ರಿಲ್ ಮೊದಲ ವಾರದಲ್ಲಿ ಹಕ್ಕು ಪತ್ರ ನೀಡುವುದಾಗಿ ಯಚ್ಚಿರಪ್ಪನ ಮೇಲೆ ಆಣೆ ಮಾಡ್ಯಾರ. ಯಾರರ ಆಗಲಿ ನಮಗ ಹಕ್ಕುಪತ್ರ ಸಿಕ್ರ ಸಾಕು.| ಹೆಸರು ಹೇಳಲು ಇಚ್ಛಿಸದ ವೃದ್ಧೆ