ಕೆ.ಆರ್.ಪೇಟೆ: ಭೀಮನ ಅಮವಾಸ್ಯೆ ಪ್ರಯುಕ್ತ ತಾಲೂಕಿನ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ಹೋಳಿಗೆ ಅಲಂಕಾರ ಕೈಗೊಂಡು ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಂಜಾನೆಯಿಂದಲೇ ಹಾಲಿನ ಅಭಿಷೇಕ, ಬಿಲ್ವಪತ್ರೆ , ಪಂಚಾಮೃತ ಅಭಿಷೇಕ ವಿಜೃಂಭಣೆಯಿಂದ ನೆರವೇರಿತು. ಮಹಾ ಮಂಗಳಾರತಿ ನಡೆಯಿತು. ಸ್ವಾಮಿಗೆ ಹೋಳಿಗೆ ಅಲಂಕಾರ ಭಕ್ತರ ವಿಶೇಷ ಗಮನ ಸಳೆಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಚಂದಗೋಳಮ್ಮನಿಗೆ ವಿಶೇಷ ಪೂಜೆ: ಭೀಮನ ಅಮಾವಾಸ್ಯೆ ಅಂಗವಾಗಿ ಭಕ್ತರು ಬ್ರಾಹ್ಮಿ ಮೂಹರ್ತದಲ್ಲಿ ಶ್ರೀ ಕ್ಷೇತ್ರಕ್ಕೆ ತೆರಳಿ ತಡೆ ಹೊಡಿಸಿ ಇಷ್ಠಾರ್ಥ ಸಿದ್ಧಿಗೆ ದೇವಿಗೆ ಪೂಜೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದಂಡು ಹರಿದು ಬಂದಿತು. ಗ್ರಾಮಾಂತರ ಠಾಣೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.
ವಿವಿಧೆಡೆ ಕಾರ್ಯಕ್ರಮ: ಪಟ್ಟಣದ ಹೊರವಲಯದಲ್ಲಿನ ಚೌಡೇಶ್ವರಿ ದೇವಸ್ಥಾನ, ಪುರ ಬಳಿಯ ಬೆಟ್ಟದಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಿದವು. ಭಕ್ತರು ದೇವಸ್ಥಾನಗಳಿಗೆ ತೆರಳಿ ಇಷ್ಠಾರ್ಥ ಸಿದ್ಧಿಗೆ ಪೂಜೆ ಸಲ್ಲಿಸಿದರು. ಮಹದೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಗೀತಾ ಗಾಯನ ಆಯೋಜಿಸಲಾಗಿತ್ತು. ಪ್ರಸಾದವಾಗಿ ಕಜ್ಜಾಯ ವಿತರಿಸಲಾಯಿತು.