ಹೊಳೆನರಸೀಪುರ: ಧರ್ಮ ಪ್ರಧಾನವಾದ ನಮ್ಮ ದೇಶದಲ್ಲಿ ಮತ, ಸಂಪ್ರದಾಯಗಳು ಹಾಗೂ ಧರ್ಮದ ಆಚರಣೆಗಳು ಬೇರೆ ಬೇರೆಯಾದರೂ ಗುರಿ ಮಾತ್ರ ಮಾನವ ಕಲ್ಯಾಣವಾಗಿದೆ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನಧೀಶ್ವರ ಜಗದ್ಗುರು ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನಿಡುವಣಿಕೊಪ್ಪಲು ಗ್ರಾಮದಲ್ಲಿ ಶ್ರೀಸಿದ್ಧೇಶ್ವರ ಹಾಗೂ ಶ್ರೀ ಮನೆಯಮ್ಮ ತಾಯಿ ದೇವಸ್ಥಾನದ ಜೀರ್ಣೋದ್ಧಾರ ಪೂಜಾ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಹಾಲಿನಲ್ಲಿ ನಾನಾ ಕ್ರಿಯೆಗಳನ್ನು ಮಾಡಿದಾಗ ಮಾತ್ರ ತುಪ್ಪವನ್ನು ಕಾಣುತ್ತೇವೆ. ಪಕ್ಷಿಗೆ ಎರಡು ರೆಕ್ಕೆ ಎಷ್ಟು ಅವಶ್ಯವೂ ಹಾಗೆ ಜ್ಞಾನ ಮತ್ತು ಕ್ರಿಯೆ ಮನುಷ್ಯನಿಗೆ ಅವಶ್ಯವಾಗಿದೆ. ಅದೇ ರೀತಿ ಆತ್ಮದಲ್ಲಿರುವ ಭಗವಂತನ ಸಾಕ್ಷಾತ್ಕಾರ ಮಾಡಬೇಕಾದ್ದು ಗುರುವಿನ ಕರ್ತವ್ಯವಾಗಿದೆ. ದೇವನೊಬ್ಬ ನಾಮ ಹಲವು ಎಂದು ತಿಳಿದ್ದಿದ್ದರೂ ಸಂಕಷ್ಟಕ್ಕೆ ಸ್ಪಂದಿಸುವ ಭಗವಂತ ಒಬ್ಬರೇ ಎನ್ನುವ ಭಾವನೆ ಬರುವ ತನಕ ಸಂಘರ್ಷ ತಪ್ಪಿದ್ದಲ್ಲವೆಂದರು.
ಸ್ವಾಭಿಮಾನ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಲ್ಲಿ ನಿರ್ಲಕ್ಷ್ಯವನ್ನು ಕಾಣುತ್ತಿದ್ದೇವೆ. ಎಲ್ಲಿಯವರೆಗೆ ಸ್ವಾಭಿಮಾನ ಬರುವುದಿಲ್ಲವೋ ಅಲ್ಲಿಯವರೆಗೆ ಬದುಕು ಇದೇ ರೀತಿಯಾಗಿರುತ್ತದೆ, ಬದಲಾವಣೆ ಕಾಣಲು ಸಾಧ್ಯವಿಲ್ಲ. ವಿಶ್ವ ಕವಿ ಡಾ.ಕುವೆಂಪು ಬರೆದಿರುವ ದೇಶ ನನ್ನದು, ನಾಡು ನನ್ನದು, ಧರ್ಮ ನನ್ನದು ಎನ್ನದ ಮಾನವ ನೆಲೆ ಸುಡಗಾಡು ಎಂಬ ಕಠೋರ ಮಾತುಗಳಿಂದ ಜನರಲ್ಲಿ ಜಾಗೃತಿ ಮೂಡಿಸಲು ಹೇಳಿರುವ ಸತ್ಯದ ಮಾತುಗಳನ್ನು ಕೇಳಿದ್ದೀರಿ. ನಿಮ್ಮ ಧರ್ಮದ ಬಗ್ಗೆ ನಿಮ್ಮ ನಿಷ್ಠೆ ಗಟ್ಟಿಯಾಗಿರಲಿ, ಆದರೆ ಇನ್ನೊಂದು ಧರ್ಮದ ಬಗ್ಗೆ ಅವಹೇಳನ ಮಾಡದೆ, ಇಲ್ಲಸಲ್ಲದ ಮಾತುಗಳನ್ನು ಆಡದೆ, ಸಹಿಷ್ಣತಾ ಮನೋಭಾವದಿಂದ ಎಲ್ಲರೂ ನಡೆದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮನುಷ್ಯನ ಬುದ್ಧಿಶಕ್ತಿ ಹೆಚ್ಚು ಬೆಳೆಯುತ್ತಿದ್ದರೂ ಬುದ್ದಿಗೆ ತಕ್ಕಂತೆ ಭಾವನೆಗಳು ಬೆಳೆಯದೇ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ,ಜನರಲ್ಲಿ ಹೊರಗೆ ಒಳಗೆ ವಿವಿಧ ಮನಸ್ಥಿತಿಯಲ್ಲಿರುವಾಗ ಉತ್ತಮ ವಾತಾವರಣ ನಿರ್ಮಾಣ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಧರ್ಮದಿಂದ ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯವಾಗಿದೆ. ಗಂಗೆಯ ನೀರಿನಿಂದ ದೇಹ ಶುದ್ಧಿಯಾದರೆ, ಆತ್ಮದ ಶುದ್ಧಿಗಾಗಿ ಇಂತಹ ಧರ್ಮ ಜಾಗೃತಿ ಪೂಜಾ ಮಹೋತ್ಸವ ಕಾರ್ಯಗಳು ಅಗತ್ಯವಾಗಿದೆ ಎಂದರು.
ಬಸವಾಪಟ್ಟಣದ ಶ್ರೀತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ವೈದಿಕ ಶಿರೋಮಣಿ ಹಾಗೂ ಪೂರೋಹಿತ ಸುಧಾಕರ ಕೆ.ಎಸ್.ದಿನೇಶ್ ಶಾಸ್ತ್ರಿಗಳು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ವೇದಿಕೆಯಲ್ಲಿ ಬೆಟ್ಟದಪುರದ ಸಲಿಲಾಖ್ಯ ಮಠದ ಚನ್ನಬಸವದೇಶೀಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿಯ ಶ್ರೀ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರಾಜಾಪುರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚಿಲುಮೆ ಮಠದ ಜಯದೇವ ಸ್ವಾಮೀಜಿ, ತೊರೆನೂರು ಹಾಗೂ ಎಲೆಮುದ್ದನಹಳ್ಳಿಯ ಶ್ರೀ ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಶ್ರೀ ಬಸವಕಲ್ಯಾಣ ಮಠದ ಸಿದ್ದಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ಬಿ.ಆರ್.ಗುರುದೇವ್ ಹಾಗೂ ಪರಮೇಶ್ವರಪ್ಪ, ಕೆಎಎಸ್ ಅಧಿಕಾರಿ ಡಾ. ಡಿ.ಬಿ.ನಟೇಶ್, ಪ್ರಭುಶಂಕರ್, ಎಸ್.ಎನ್.ನಂಜಪ್ಪ, ಎನ್.ರವಿಕುಮಾರ್, ಡಿ.ಆರ್.ಪ್ರದೀಪ್ ಕುಮಾರ್, ಶಿವಕುಮಾರ್ ಹಾಗೂ ಇತರರು ಇದ್ದರು.