ಜಿಲ್ಲೆ

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಹಾನಿ

ಹೊಳೆನರಸೀಪುರ: ಪಟ್ಟಣದ ಹಾಸನ- ಮೈಸೂರು ರಸ್ತೆಯ ಬಿಇಒ ಕಚೇರಿ ಸಮೀಪ ಕೆ.ಕುಮಾರಸ್ವಾಮಿ ಎಂಬುವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯ ವಸ್ತುಗಳು ಸುಟ್ಟು ಕರಕಲಾಗಿವೆ.


ಪಟ್ಟಣದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದು, ಕಾಮಗಾರಿಗೆ ಅಗತ್ಯ ಸಾಮಗ್ರಿ ಸರಬರಾಜು ಮಾಡುವ ಲಾರಿ ಸೋಮವಾರ ಸಂಜೆ 7.15 ಸುಮಾರಿನಲ್ಲಿ ವಿದ್ಯುತ್ ಕಂಬಕ್ಕೆ ಸ್ಪರ್ಶಿಸಿದೆ. ಆ ಸಂದರ್ಭದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಫ್ರಿಜ್, ವಾಷಿಂಗ್ ಮೆಷಿನ್, ವಾಟರ್ ಫಿಲ್ಟರ್, ದೇವರ ಮನೆ ಬಾಗಿಲು, ಬಟ್ಟೆಗಳು, ದಿನ ಬಳಕೆ ಅಗತ್ಯ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬೆಂಕಿ ಅವಘಡ ಸಂಭವಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.


ಪತ್ನಿ ತೇಜೇಶ್ವರಿ ಕೆರಗೋಡು ಗ್ರಾಮದಲ್ಲಿ ಶಿಕ್ಷಕಿಯಾಗಿದ್ದು, ರಜೆ ಇದ್ದ ಕಾರಣ ಗ್ಯಾಸ್ ಸಿಲಿಂಡರ್ ಅನ್ನು ತವರಿಗೆ ತೆಗೆದುಕೊಂಡು ಹೋಗಿದ್ದರು. ಆದ್ದರಿಂದ ಇನ್ನೂ ಹೆಚ್ಚಿನ ಸ್ವರೂಪದ ಅನಾಹುತ ನಡೆದಿಲ್ಲವೆಂದು ಕೆ.ಕುಮಾರಸ್ವಾಮಿ ತಿಳಿಸಿದರು.


ಅಗ್ನಿಶಾಮಕ ಇಲಾಖೆ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ಹೆಚ್ಚಿನ ಅನಾಹುತ ನಡೆಯದಂತೆ ಬೆಂಕಿಯನ್ನು ನಂದಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.