ಹೊಳೆನರಸೀಪುರ: ಹಿರಿಯ ಪರ್ತಕರ್ತ ದಿ.ಎನ್.ಎಸ್.ರಾಮ್‌ಪ್ರಸಾದ್ ವೃತ್ತಿಯ ಜತೆಯಲ್ಲಿ ಹಿಂದಿ ಪ್ರಚಾರಸಭಾ ಪ್ರಾರಂಭಿಸಿ, ಹಲವರ ಜೀವನಕ್ಕೆ ಆಸರೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ಶಾಸಕ ಎಚ್.ಡಿ.ರೇವಣ್ಣ ಸ್ಮರಿಸಿದರು.
ಪಟ್ಟಣದ ಕೋಟೆ ಮುಖ್ಯರಸ್ತೆಯ ಶ್ರೀ ಮಾರಮ್ಮಗುಡಿ ಸಮೀಪದ ನಿವೇಶನದಲ್ಲಿ ಪತ್ರಿಕಾ ಭವನಕ್ಕೆ ಭೂಮಿಪೂಜೆ ನರೆವೇರಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಸಮಾಜಮುಖಿ ಕಾರ್ಯದಿಂದ ಪ್ರಖ್ಯಾತರಾಗಿದ್ದ ರಾಮ್‌ಪ್ರಸಾದ್ ಅವರ ಜ್ಞಾಪಕಾರ್ಥವಾಗಿ ಪತ್ರಕರ್ತರ ಭವನ ಮತ್ತು ಹಿಂದಿ ಪ್ರಚಾರ ಸಭಾವನ್ನು ಪುನಾರಂಭಿಸುವ ಸಲುವಾಗಿ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ. 1.25 ಕೋಟಿ ರೂ.ಗಳಲ್ಲಿ ನೆಲ ಮತ್ತು ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ವಿಶೇಷ ಉಪ ವಿಭಾಗದ ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ವೆಂಕಟೇಶ್, ಶೇಖರ್, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ವೆಂಕಟೇಶ್ ಆಚಾರ್, ಎಚ್.ವಿ. ಸುರೇಶ್ ಕುಮಾರ್, ರಾಮಕೃಷ್ಣ, ನಾಝಿರ್ ಇತರರು ಇದ್ದರು.