ಹೊಳೆನರಸೀಪುರ: ನಿತ್ಯ ವ್ಯಾಯಾಮದ ಜತೆಗೆ ದುಶ್ಚಟಗಳಿಂದ ದೂರವಿದ್ದು, ಒತ್ತಡಕ್ಕೆ ಒಳಗಾಗದಿದ್ದರೆ ಆರೋಗ್ಯವಂತರಾಗಿಬರಹುದು ಎಂದು ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕಿ ಭಾನುಶ್ರೀ ಸಲಹೆ ನೀಡಿದರು.
ತಾಲೂಕಿನ ಬಾಗಿವಾಳು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ, ಗ್ರಾಮ ಆರೋಗ್ಯ ಯೋಜನೆ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಿಯಾದ ಸಮಯಕ್ಕೆ ಅಗತ್ಯ ಪ್ರಮಾಣದಲ್ಲಿ ಆಹಾರ ಸೇವಿಸದಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ. ಆದ್ದರಿಂದ ಸಮತೋಲನ ಆಹಾರ ಸೇವನೆ, ಕಡಿಮೆ ಉಪ್ಪು ಹಾಗೂ ಸಕ್ಕರೆ ಜತೆಗೆ ಕೊಬ್ಬಿನಾಂಶ ಆಹಾರದ ಮಿತ ಬಳಕೆಯಿಂದ ಹೃದಯದ ಕಾಳಜಿ ವಹಿಸಲು ಸಾಧ್ಯ. ಜೀವನ ಶೈಲಿ, ಆಹಾರ ಪದ್ಧತಿಯಿಂದ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಪಾರ್ಶ್ವವಾಯು ಹಾಗೂ ಇತರ ರೋಗಗಳನ್ನು ಸುಧಾರಿಸಬಹುದಾಗಿದೆ ಎಂದರು.
ಇಂದಿನ ಆಹಾರ ಪದ್ಧತಿ, ದುಶ್ಚಟಗಳು, ಇತರ ಕಾರಣಗಳಿಂದ ಅಸಾಂಕ್ರಮಿಕ ರೋಗಗಳು ಚಿಕ್ಕ ವಯಸ್ಸಿನಲ್ಲೇ ಕಂಡು ಬರುತ್ತಿರುವ ಕಾರಣ 30 ವರ್ಷದ ನಂತರ ರಕ್ತದೊತ್ತಡ ಹಾಗೂ ಮಧುಮೇಹದ ಪರೀಕ್ಷೆಗೆ ಎಲ್ಲರೂ ಒಳಪಡುವುದು ಅಗತ್ಯವಾಗಿದೆ. ಕುಟುಂಬದಲ್ಲಿ ಎಲ್ಲರಿಗೂ ಜವಾಬ್ದಾರಿ ಇದ್ದು, ಉತ್ತಮ ಆರೋಗ್ಯ ಕುಟುಂಬದ ಏಳಿಗೆಗೆ ಅಗತ್ಯವಾಗಿದೆ ಎಂದು ತಿಳಿಸಿದರು.
ಐಸಿಟಿಸಿ ವಿಭಾಗದ ಜ್ಯೋತಿ, ಗ್ರಾಮ ಆರೋಗ್ಯ ಸಂಯೋಜಕ ಐ.ಕೆ.ರಮೇಶ್, ಆರೋಗ್ಯ ಮಿತ್ರ ವೀರಭದ್ರಪ್ಪ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಂಯೋಜಕ ಮಹದೇವ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.