ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಮದ ವಿವೇಕಾನಂದ ಸರ್ಕಾರಿ ಪ್ರೌಢಶಾಲೆ ಆವರಣದ ಕಸದ ರಾಶಿಯಲ್ಲಿ ಶನಿವಾರ ಒಂದ ಚೀಲದಷ್ಟು ಬಿಸಿಯೂಟದ ಅಕ್ಕಿ ಎಸೆದಿರುವುದು ಕಂಡು ಬಂದಿದೆ.
ಶಾಲೆಯ ತರಗತಿಗಳು ಮುಕ್ತಾಯಗೊಂಡ ನಂತರ ಗ್ರಾಮದ ಯುವಕರು ಶನಿವಾರ ಮಧ್ಯಾಹ್ನ ಆವರಣದಲ್ಲಿ ಕ್ರಿಕೆಟ್ ಆಡಲು ತೆರಳಿದ್ದಾರೆೆ. ಈ ವೇಳೆ ಕಸ ರಾಶಿಯಲ್ಲಿ ಅಕ್ಕಿ ಬಿಸಾಡಿರುವುದನ್ನು ಗಮನಿಸಿ ಗ್ರಾಮದ ಹಿರಿಯರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಗ್ರಾಮಸ್ಥರು ಬಿಸಿಯೂಟ ಸಿಬ್ಬಂದಿ ವಿರುದ್ಧ ಆಕ್ರೊಶ ವ್ಯಕ್ತ ಪಡಿಸಿದ್ದಾರೆ. ಗ್ರಾಮಸ್ಥರು ಶಾಲೆ ಮುಖ್ಯಶಿಕ್ಷಕರಿಗೆ ಕರೆ ಮಾಡಿದ್ದು, ರೆಜೆಯಲ್ಲಿರುವೆ ಎಂದು ಉತ್ತರ ನೀಡಿದ್ದಾರೆ. ನಂತರ ಕಸದ ರಾಶಿಯಲ್ಲಿ ಅಕ್ಕಿ ಎಸೆದಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಗಮನಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹೊಳಲು ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಕಿ ಎಸೆದಿರುವುದು ಗಮನಕ್ಕೆ ಬಂದ ಕೂಡಲೇ ಗ್ರಾಮಕ್ಕೆ ತೆರಳಿ ಗ್ರಾಮಸ್ಥರು ಮತ್ತು ಎಸ್ಡಿಎಂಸಿ ಸದಸ್ಯರ ಸಮ್ಮುಖದಲ್ಲಿ ಅಕ್ಕಿ ಪರಿಶೀಲಿಸಲಾಗಿದೆ. ಬೂಸ್ಟ್ ಬಂದ ಅಕ್ಕಿಯನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಆದರೆ ಸಿಬ್ಬಂದಿ ಕಸದ ರಾಶಿಗೆ ಹಾಕಿದ್ದಾರೆ. ಈ ಕುರಿತು ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.ವಿ.ಹನುಮಂತಪ್ಪ ಸಹಾಯಕ ನಿರ್ದೇಶಕ, ತಾಲೂಕು ಅಕ್ಷರ ದಾಸೋಹ, ಹೂವಿನಹಡಗಲಿ