ಜಿಲ್ಲೆ

90 ಕೆರೆಗಳಿಗೆ ಭದ್ರೆ ನೀರು

ಹೊಳಲ್ಕೆರೆ: ಅಜ್ಜಂಪುರದ ರೈಲ್ವೆ ಹಳಿ ಕ್ರಾಸ್ ಬಳಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲಿ, ಡಿಸೆಂಬರ್ ವೇಳೆಗೆ ತಾಲೂಕಿನ ಕೆರೆಗಳಿಗೆ ಭದ್ರೆ ನೀರು ಹರಿಯಲಿದೆ ಎಂದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ತಾಲೂಕಿನ ನುಲೇನೂರು, ಇಡೀಹಳ್ಳಿ, ಜಿ.ಎಸ್.ಹಳ್ಳಿಯಲ್ಲಿ ರಸ್ತೆ, ನೀರು, ಟ್ಯಾಂಕ್, ಕೆರೆ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಕ್ಷೇತ್ರದಲ್ಲಿನ 90 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ. ಸಾಸ್ವೆಹಳ್ಳಿ ನೀರಾವರಿ ಯೋಜನೆಯಲ್ಲಿ ಭರಮಸಾಗರ, ಹೊಳಲ್ಕೆರೆ ಭಾಗದ ಕೆರೆಗಳು ಸೇರಿವೆ. ಈ ನಿಟ್ಟಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ 622 ಕೋಟಿ ರೂ. ಹಾಗೂ ಹೊಳಲ್ಕೆರೆಯಿಂದ ಎಚ್.ಡಿ.ಪುರಕ್ಕೆ ನೀರು ಪೂರೈಕೆ ಮಾಡಲು 108 ಕೋಟಿ ರೂ. ಅನುದಾನದ ಟೆಂಡರ್‌ಗಳು ಪ್ರಕ್ರಿಯೆಯಲ್ಲಿವೆ ಎಂದರು.

255 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸಂಗ್ರಹ ಸ್ಥಾವರವನ್ನು ತಾಲೂಕಿನ ಬಾಣಗೆರೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಶರಾವತಿ ವಿದ್ಯುತ್ ಸ್ಥಾವರದಿಂದ ನೇರ ಬಾಣಗೆರೆ ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಪೂರೈಕೆ ಆಗಲಿದೆ ಎಂದು ತಿಳಿಸಿದರು.

ಜಿಪಂ ಸದಸ್ಯ ಡಿ.ಕೆ.ಶಿವಮೂರ್ತಿ, ತಾಪಂ ಪರಮೇಶ್ವರಪ್ಪ, ಮುಖಂಡರಾದ ಈಶ್ವರಪ್ಪ, ಶಂಕರಪ್ಪ, ನುಲೇನೂರು ಗ್ರಾಪಂ ಅಧ್ಯಕ್ಷ ಮಹತೇಶ್, ಗುತ್ತಿಗೆದಾರ ರಾಜಣ್ಣ ಇತರರು ಇದ್ದರು.

ಇಡೇಹಳ್ಳಿ ಮುಖ್ಯರಸ್ಥೆ, ಶಾಲೆ ಕೊಠಡಿ ನಿರ್ಮಾಣ, ಕೆರೆ ಅಭಿವೃದ್ಧಿಗೆ ಈ ವೇಳೆ ಶಾಸಕರು ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ವನಜಾಕ್ಷಮ್ಮ, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್ ಉಪಸ್ಥಿತರಿದ್ದರು.

ಜಿ.ಎಸ್.ಹಳ್ಳಿ ಗುಡ್ಡದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಚಿಕ್‌ಡ್ಯಾಮ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದರು. ವಕೀಲ ಮಹಾಲಿಂಗಪ್ಪ, ಶಿಕ್ಷಕ ಕಾಂತರಾಜ್ ಇತರರಿದ್ದರು.