ಹೊಳಲ್ಕೆರೆ: ಕ್ಷೇತ್ರದಲ್ಲಿ ನಾನು ಮಾಡಿದ್ದ ಅಭಿವೃದ್ಧಿ ಕಾರ್ಯಗಳ ಕುರಿತು ಮುಂಬಯಿ, ದೆಹಲಿ, ನಾಗಪುರ ವಿವಿ ಕುಲಪತಿಗಳು ಸರ್ಕಾರಕ್ಕೆ
ವರದಿ ಸಲ್ಲಿಸಿದ ಪರಿಣಾಮ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದು, ಇದನ್ನು ಕ್ಷೇತ್ರದ ಜನರಿಗೆ ಅರ್ಪಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ರಾಮಗಿರಿ ಹೋಬಳಿಯ ದೊಗ್ಗನಾಳ್ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ದೊಗ್ಗನಾಳ್-ನುಲೇನೂರು ಮಾರ್ಗ ರಸ್ತೆ ಅಭಿವೃದ್ಧಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಪಕ್ಷದ ಸರ್ಕಾರ ಇರಲಿ ಅನುದಾನ ಹೇಗೆ ತರಬೇಕೆಂಬುದು ನನಗೆ ಗೊತ್ತಿದೆ. ಈ ಕಾರಣಕ್ಕೆ ಕ್ಷೇತ್ರದಲ್ಲಿ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ ಎಂದರು.
ರಂಗಾಪುರದಿಂದ ಮಲ್ಲಾಡಿಹಳ್ಳಿ ರಸ್ತೆಗೆ ಒಂದು ಕೋಟಿ ರೂ. ಗಳನ್ನು ನೀಡಿದ್ದೇನೆ. ಇನ್ನು ಐದು ವರ್ಷಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು.
ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಸಚಿವರು, ಅಧಿಕಾರಿಗಳ ಬಳಿ ತೆರಳಿ ಅನುದಾನ ತರುವ ಜಾಣ್ಮೆ ನನ್ನಲ್ಲಿದೆ ಎಂದು ಹೇಳಿದರು.
ತಾಲೂಕಿನ ಬೊಮ್ಮನಕಟ್ಟೆ, ಬಿ.ದುರ್ಗ ಹಾಗೂ ಹೊಳಲ್ಕೆರೆ ಪಟ್ಟಣದ ಬಳಿ ಗುಡ್ಡಗಳನ್ನು ಆಯ್ಕೆ ಮಾಡಿಕೊಂಡು ವಸತಿ ಶಾಲೆ, ಕಾಲೇಜುಗಳನ್ನು ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದೇನೆ.
ಎಂ.ಎಂ.ಸರ್ಕಾರಿ ಪ್ರೌಢಶಾಲೆಗೆ ಸ್ವಂತ ಹಣದಿಂದ ಬಸ್ ನೀಡಿದ್ದೇನೆ. ಕಂಪ್ಯೂಟರ್, ಸುಸಜ್ಜಿತವಾದ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್‌ಗಳನ್ನಾಗಿ ಮಾಡಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಚಿತ್ರಹಳ್ಳಿ, ಭರಮಸಾಗರ ಭಾಗದ ಸರ್ಕಾರಿ ಶಾಲೆಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಜೆ.ಎಚ್.ಪಟೇಲ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಖ್ಯಾತ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದಲ್ಲಿ ಆಯೋಗ ರಚಿಸಿ ರಾಜ್ಯದ
ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಸೂಚಿಸಿತ್ತು.
ಅದರಂತೆ ಅವರು ನೀಡಿದ ವರದಿಯನ್ವಯ ಪ್ರತಿ ವರ್ಷ 4 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿಗೆ ಮುಡಿಪಾಗಿಡುವ ಕೆಲಸ ಮಾಡಲಾಗಿದೆ.
ಹೀಗಾಗಿ ಸರ್ಕಾರದಿಂದ ಅನುದಾನ ತರುವುದು ನನಗೆ ಕಷ್ಟವೇನಲ್ಲ ಎಂದರು.
ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ನಾಗರಾಜ್, ಸದಸ್ಯರಾದ ಆಶಾ ಪ್ರಕಾಶ್, ಮಹೇಶಣ್ಣ, ಕೃಷ್ಣಮೂರ್ತಿ, ರುದ್ರಪ್ಪ, ರಮೇಶ್ ಗೌಡ್ರು, ಗಂಗಾಧರ್ ಇತರರಿದ್ದರು.
ಗ್ರಾಮಕ್ಕೆ ಬಹುದೊಡ್ಡ ಖ್ಯಾತಿ: ದೊಗ್ಗನಾಳ್ ಗ್ರಾಮ ಬಹುದೊಡ್ಡ ಕೊಡುಗೆ ನಾಡಿಗೆ ನೀಡಿದೆ.
ಗ್ರಾಮದವರೇ ಆದ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿ ಆಧರಿಸಿ ರಾಜ್ಯದ ಹಿಂದುಳಿದ ಪ್ರದೇಶಗಳಿಗೆ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಅವರ ವರದಿಯನ್ವಯ ಮೊಳಕಾಲ್ಮೂರು, ಹೊಳಲ್ಕೆರೆ, ಜಗಳೂರು ಸೇರಿ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ.
ಅವರ ಆದರ್ಶ, ಚಿಂತನೆಗಳನ್ನು ಗ್ರಾಮ, ತಾಲೂಕಿನ ಜನರು ಅಳವಡಿಸಿಕೊಳ್ಳಬೇಕು. ಅವರಂತೆ ಈಗಿನ ಪೀಳಿಗೆ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.