ಹೊಳಲ್ಕೆರೆ: ದೇವಸ್ಥಾನ, ಹೋಟೆಲ್‌ಗಳು ಸೋಮವಾರದಿಂದ ಕಾರ್ಯ ಚಟುವಟಿಕೆಗಳನ್ನು ಪುನರಾರಂಭಿಸಿವೆ. ದೇಗುಲಗಳ ಬಾಗಿಲು ತೆರೆದಿದ್ದು ಭಕ್ತರ ದರ್ಶನಕ್ಕೆ ಪ್ರವೇಶಾವಕಾಶ ಕಲ್ಪಿಸಿವೆ.
ಐತಿಹಾಸಿಕ ಪ್ರಸಿದ್ಧ ಗಣಪತಿ, ಎಚ್.ಡಿ.ಪುರದ ಶ್ರೀಲಕ್ಷಿ ್ಮೀ ರಂಗನಾಥಸ್ವಾಮಿ, ರಾಮಗಿರಿ ಕರಿಸಿದ್ದೇಶ್ವರ, ಕಡೂರು ವೀರಭದ್ರೇಶ್ವರ ದೇಗುಲಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ ಜರುಗಿದವು.
ಜೈನ್ ಬಸದಿ, ಚರ್ಚ್‌ಗಳು, ಪ್ರಾರ್ಥನಾ ಮಂದಿರಗಳಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿರಲಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಹೋಟೆಲ್‌ಗಳು ಖಾಲಿ ಖಾಲಿ: ಹೋಟೆಲ್‌ಗಳಲ್ಲಿ ಜನರಿಲ್ಲದೆ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಆಗಮಿಸಲಿಲ್ಲ. ಸೋಮವಾರ ವ್ಯಾಪಾರ ವಹಿವಾಟು ಸಾಧಾರಣವಾಗಿತ್ತು. ಇನ್ನು ಹಳ್ಳಿಗರು ಪಟ್ಟಣಕ್ಕೆ ಬರಲು ಸಮರ್ಪಕವಾಗಿ ಸಾರಿಗೆ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಅಂಗಡಿ, ಮುಂಗಟ್ಟು ಹಿಂದಿನಂತೆ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗಲಿಲ್ಲ.
ದೇಗುಲ ಸಮಿತಿ ಸದಸ್ಯ
ರಘುನಾಯಕ
ಪಟ್ಟಣದ ಗಣಪತಿ ದೇವಸ್ಥಾನ ಬಾಗಿಲು ತೆರೆದಿದ್ದು, ಸೋಮವಾರ ಸಂಕಷ್ಠಹರ ಚತುರ್ಥಿ ಇದ್ದರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಎಂದಿಗಿಂತ ತೀರ ಕಡಿಮೆ ಆಗಮಿಸಿದ್ದರು.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು, ದೇಗುಲ ಸಮಿತಿ ಸದಸ್ಯರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿದೆ. ಎಲ್ಲರಿಗೂ ಸ್ಯಾನಿಟೈಸರ್, ಮಾಸ್ಕ್, ಪರಸ್ಪರ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಎಚ್.ಆರ್.ನಾಗರತ್ನ ವೇದಮೂರ್ತಿ
ಸದಸ್ಯರು, ಪಟ್ಟಣ ಪಂಚಾಯಿತಿ