ಹೊಳಲ್ಕೆರೆ: ಪಟ್ಟಣದ ಗಣಪತಿ ದೇವಸ್ಥಾನ ಹಿಂಭಾಗದ ಚರಂಡಿ ಶುಚಿತ್ವಕ್ಕೆ ಆಗ್ರಹಿಸಿ ಶನಿವಾರ ಪಟ್ಟಣದಲ್ಲಿ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಚರಂಡಿಯನ್ನು ಏರುಗತಿಯಲ್ಲಿ ನಿರ್ಮಿಸಿದ್ದರಿಂದ ನೀರು ಮುಂದೆ ಹೋಗದೆ ತ್ಯಾಜ್ಯ ಸಂಗ್ರಹಗೊಂಡ ದುರ್ವಾಸನೆ ಬೀರುತ್ತಿದೆ. ಸದ್ಗುರು ಆಶ್ರಮದಿಂದ ವೀರಭದ್ರಸ್ವಾಮಿ ದೇವಸ್ಥಾನದವರೆಗೂ ಇದೇ ಪರಿಸ್ಥಿತಿ ಇದೆ.
ತ್ಯಾಜ್ಯದಿಂದ ಚರಂಡಿ ಆಳ ಸಮತಟ್ಟಾಗಿದ್ದು, ಇಲ್ಲಿ ನೀರು ಕುಡಿಯಲೆಂದು, ತ್ಯಾಜ್ಯ ತಿನ್ನಲೆಂದು ಹೋಗುವ ಬಹಳಷ್ಟು ಜಾನುವಾರುಗಳು ಚರಂಡಿಯಲ್ಲಿ ಬಿದ್ದು ಗಾಯಗೊಂಡಿವೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ರೈತ ಸಂಘದ ಕಾರ್ಯದರ್ಶಿ ಅಜಯ್, ಉಪಾಧ್ಯಕ್ಷ ಡಿ. ಮಲ್ಲಪ್ಪ, ಡಿ.ಈ. ರವಿ, ಗೌಡ್ರ ನಾಗರಾಜ್, ಕುಮಾರ್ ಆಚಾರ್, ಕೆರೆಗುಂಡಿ ನಾಗರಾಜ್, ಶಿವಮೂರ್ತಿ, ಚಿಕ್ಕಣ್ಣ, ಮಹೇಶ್, ದರ್ಶನ್ ಭಾಗವಹಿಸಿದ್ದರು.
ಸ್ಪಂದನೆ: ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಪಂ ಅಧಿಕಾರಿ, ಸಿಬ್ಬಂದಿ ತಕ್ಷಣ ಸ್ವಚ್ಛತಾ ಕಾರ್ಯ ನಡೆಸಿದರು.