ಹೊಳಲ್ಕೆರೆ: ನುಡಿದಂತೆ ನಡೆಯುವ ಶಾಸಕರಲ್ಲಿ ಎಂ.ಚಂದ್ರಪ್ಪ ಕೂಡ ಒಬ್ಬರು ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಇಲ್ಲಿನ ಎಸ್‌ಜೆಎಂ ಕಾಲೇಜು ಆವರಣದಲ್ಲಿ ಶುಕ್ರವಾರ ರಂಜಾನ್ ಅಂಗವಾಗಿ ಮುಸ್ಲಿಮರಿಗೆ ಪಡಿತರ ಧಾನ್ಯ ವಿತರಣೆ ಮಾಡಿ ಮಾತನಾಡಿದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜನರಿಗೆ ನೀಡಿದ ಭರವಸೆ ಈಡೇರಿಸಲು ಶಾಸಕ ಎಂ.ಚಂದ್ರಪ್ಪ ಶ್ರಮಿಸುತ್ತಿದ್ದಾರೆ. ನುಡಿದಂತೆ ನಡೆದುಕೊಳ್ಳುವ ಮನೋಭಾವ ಜನಪ್ರತಿನಿಧಿಗಳು ಬೆಳೆಸಿಕೊಳ್ಳಬೇಕು ಎಂದರು.
ರಂಜಾನ್ ಮುಸ್ಲಿಮರ ಪಾಲಿಗೆ ಪವಿತ್ರ ಆಚರಣೆ. ಪ್ರತಿಯೊಬ್ಬರು ಶ್ರದ್ಧಾಭಕ್ತಿಯಿಂದ ಉಪವಾಸವಿದ್ದು ಧರ್ಮಾರಾಧನೆ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪಪಂ ಮುರುಗೇಶ್ ಪಡಿತರ ಧಾನ್ಯ ಕಿಟ್ ಕೊಡುಗೆಯಾಗಿ ನೀಡಿದರು. ಶಾಸಕ ಎಂ.ಚಂದ್ರಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಕಾಶಿಸಿದ್ದೇಶ್, ಪಪಂ ಸದಸ್ಯರಾದ ಕೆ.ಸಿ.ರಮೇಶ್, ಮಲ್ಲಿಕಾರ್ಜುನ್, ಬಸವರಾಜ್ ಯಾದವ್, ಗುತ್ತಿಗೆದಾರ ಮಾರುತೇಶ್, ಎಲ್.ಬಿ.ರಾಜಶೇಖರ್, ಮರುಳಸಿದ್ದೇಶ್, ಪ್ರವೀಣ್, ಬಸವರಾಜ್ ಇದ್ದರು.