ಜಿಲ್ಲೆ

25 ಹೆಕ್ಟೇರ್‌ನಲ್ಲಿ ಟ್ರೀ ಪಾರ್ಕ್ ನಿರ್ಮಾಣ

Chitradurga

ಹೊಳಲ್ಕೆರೆ: ಪಟ್ಟಣದ ಹನುಮಂತ ದೇವರ ಕಣಿವೆಯ 25 ಹೆಕ್ಟೇರ್ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು 2 ಕೋಟಿ ರೂ. ಅನುದಾನ ರಾಜ್ಯ ಸರ್ಕಾರ ನೀಡಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ತಾಲೂಕು ಅರಣ್ಯ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ, ಸೌರದೀಪ ಮತ್ತಿತರ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಐದು ಸಾವಿರ ಸಸಿಗಳನ್ನು ಕಣಿವೆಯ ಬೋಳು ಗುಡ್ಡದಲ್ಲಿ ನೆಡಲಾಗುವುದು ಎಂದರು.

ತಾಲೂಕಿನ ಸಾವಿರಾರು ಎಕರೆ ಗುಡ್ಡಗಾಡು ಪ್ರದೇಶವಿದೆ. ಅರಣ್ಯ ಇಲಾಖೆಗೆ ಬರುವಂತ ಅನುದಾನದಲ್ಲಿ ಬೋಳು ಬೆಟ್ಟಗಳಲ್ಲಿ ಸಸಿ ನೆಟ್ಟು ಕಾಡು ಬೆಳೆಸುವ ಕೆಲಸ ಮಾಡಬೇಕು. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರಣ್ಯ ಕಚೇರಿ ಎದುರೇ ಗಿಡಗಳನ್ನು ನೆಟ್ಟಿಲ್ಲ ಎಂದು ಬೇಸರಿಸಿದರು.

ಬೆಟ್ಟಗಳಲ್ಲಿ ಸಸಿ ನೆಟ್ಟು ಅವುಗಳನ್ನು ಬೆಳೆಸಲು ಬೇಕಾದ ನೀರಿನ ಸೌಲಭ್ಯ ಕಲ್ಪಿಸಲು ಕೊಳವೆಬಾವಿ ಹಾಗೂ 2 ನೀರಿನ ಟ್ಯಾಂಕರ್ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ನೆರವು ನೀಡುತ್ತೇನೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಸಿ.ರಮೇಶ್, ಪಿ.ಆರ್.ಮಲ್ಲಿಕಾರ್ಜುನ್, ಮಾಜಿ ಸದಸ್ಯ ಎಸ್.ಬಿ.ಶಿವರುದ್ರಪ್ಪ, ಸಾಮಾಜಿಕ ಅರಣ್ಯಾಧಿಕಾರಿ ಬಹುಗುಣ, ವಲಯ ಅರಣ್ಯಾಧಿಕಾರಿ ಎಚ್.ರಾಮಮೂರ್ತಿ, ಮಾಜಿ ಪ್ರಧಾನ ಎಚ್.ಜಿ.ಆನಂದ್, ಶಿಕ್ಷಕ ಎನ್.ಕಾಂತರಾಜ್, ಪ್ರವೀಣ್, ಮಹಾಂತೇಶ್ ನಾಯ್ಕ ಇದ್ದರು.