ಜಿಲ್ಲೆ

ಸವಿತಾ ಸಮಾಜವನ್ನು ಎಸ್ಸಿಗೆ ಸೇರಿಸಿ

Chitradurga

ಹೊಳಲ್ಕೆರೆ: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸವಿತಾ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಸಮುದಾಯದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸವಿತಾ ಸಮಾಜದಿಂದ ಪಟ್ಟಣದ ಗಣಪತಿ ಸಮುದಾಯಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗಿದೆ ಎಂದರು.

ನಮ್ಮ ಮೂಲ ವೃತ್ತಿಯಾದ ಕ್ಷೌರ, ವೈದ್ಯ, ಸಂಗೀತ, ಕಲಾ ಜ್ಞಾನ ಎಂದೂ ಮರೆಯಬಾರದು. ಇದರಿಂದಲೇ ಜೀವನ ರೂಪಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾಪಟು ಎನ್.ಡಿ.ಕುಮಾರ್ ಮಾತನಾಡಿ, ಅಸ್ಪಶ್ಯತೆ ನೋವು ಅನುಭವಿಸುತ್ತಿರುವ ಸವಿತಾ ಸಮುದಾಯಕ್ಕೆ ಎಸ್ಸಿ ಮೀಸಲಾತಿ ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ರೂಪಿಸಬೇಕು ಎಂದರು.

ಪೂರ್ವಜರ ಕಾಲದಿಂದಲೂ ಮೂಲ ವೃತ್ತಿಯಲ್ಲೇ ಜೀವನ ನಡೆಸುತ್ತಿರುವ ಸವಿತಾ ಸಮಾಜ ಯಾವುದೇ ಸ್ಥಾನಮಾನವಿಲ್ಲದೆ ಹಿಂದುಳಿದಿದೆ. ಸಮುದಾಯದವರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದು ತಿಳಿಸಿದರು.

ಉಪನ್ಯಾಸಕಿ ಡಾ.ರೇಖಾ ನರಸಿಂಹ, ನಿವೃತ್ತ ಯೋಧ ನರಸಿಂಹ, ಬಿಜೆಪಿ ಮುಖಂಡರಾದ ಎಂ.ಸಿ.ರಘು ಚಂದನ್, ಡಿ.ಸಿ.ಮೋಹನ್, ಕೆ.ಸಿ.ರಮೇಶ್, ಪಪಂ ಮುಖ್ಯಾಧಿಕಾರಿ ವಾಸೀಂ ಮಾತನಾಡಿದರು.

ವಿವಿಧ ಕ್ಷೇತ್ರ ಸಾಧಕರನ್ನು ಸನ್ಮಾನಿಸಲಾಯಿತು. ಸವಿತಾ ಸಮಾಜದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಎನ್.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.