ಹೊಳಲ್ಕೆರೆ: ಹೊಸದುರ್ಗ ಮಾರ್ಗದಲ್ಲಿರುವ ಸಣ್ಣ ಕೆರೆ ಅಭಿವೃದ್ಧಿಗೆ 11 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ರಸ್ತೆ ವಿಸ್ತರಣೆ ಕಾಮಗಾರಿ ವೀಕ್ಷಿಸಿ ಮಾತನಾಡಿ, ಕೆರೆ ಮೇಲೆ ಆರು ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಜತೆಗೆ ಪುಟ್‌ಪಾತ್ ಹಾಗೂ ವಾಯುವಿಹಾರಕ್ಕೆ ಚಿಕ್ಕ ಉದ್ಯಾನವನ ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಮಕೊಂಡಿರುವ ಪಟ್ಟಣದ ಗಣಪತಿ ವೃತ್ತ, ಬಸ್ ನಿಲ್ದಾಣ, ಹೊಸದುರ್ಗ ರಸ್ತೆಯನ್ನು ವಿಸ್ತರಣೆ ಮಾಡುವಲ್ಲಿ ಒತ್ತುವರಿ ಮಾಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಪಟ್ಟಣದ ಕೊಳೆಚೆ ನೀರು ಸರಾಗವಾಗಿ ಹರಿಯುವಂತೆ ಬೃಹತ್ ಚರಂಡಿ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ ಎಂದರು.
ಸಣ್ಣ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸಲಾಗುತ್ತದೆ. ಸ್ಥಳದಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣ ಮಾಡಿ ಅಲ್ಲಿಂದ ತಾಳ್ಯ, ಎಚ್.ಡಿ.ಪುರ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಈಗಾಗಲೆ 101 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.
ಕೆರೆಯಲ್ಲಿ ವರ್ಷ ಪೂರ್ತಿ ನೀರು ಇರುವುದರೊಂದಿಗೆ ಕೆರೆ ಮಧ್ಯೆ ಬೃಹತ್ ಗಾತ್ರದ ಶಿವನ ವಿಗ್ರಹ ಸ್ಥಾಪಿಸಿ ವಿಶೇಷ ವಿನ್ಯಾಸದಲ್ಲಿ ನೀರಿನ ಕಾರಂಜಿ ನಿರ್ಮಾಣ ಮಾಡುವ ಚಿಂತನೆ ಇದೆ ಎಂದರು.
ಇಂಜಿನಿಯರ್ ಮಹಾಬಲೇಶ್, ಗುತ್ತಿಗೆದಾರ ರಾಜಪ್ಪ ಹಾಗೂ ಪಪಂ ಸದಸ್ಯರು ಉಪಸ್ಥಿತರಿದ್ದರು.