ಹೊಳಲ್ಕೆರೆ: ಕ್ಯಾನ್ಸರ್ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ ಕ್ಯಾನ್ಸರ್ ಶಸ್ತ್ರತಜ್ಞ ಡಾ.ಹರೀಶ್ ತಿಳಿಸಿದರು.
ಪಟ್ಟಣದ ರೋಟರಿ ಸಂಸ್ಥೆಯ 115ನೇ ವರ್ಷದ ಸ್ಥಾಪನೆ ದಿನ ಮತ್ತು ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕ್ಯಾನ್ಸರ್ ಆರಂಭಿಕ ಪತ್ತೆ ಮತ್ತು ಸಮಗ್ರ ಚಿಕಿತ್ಸೆ ಕುರಿತ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕೆಟ್ಟ ಹವ್ಯಾಸ ಹಾಗೂ ಸರಿಯಾದ ಜೀವನ ಶೈಲಿ ಇಲ್ಲದಿರುವುದೇ ಕ್ಯಾನ್ಸರ್ ಆಹ್ವಾನಕ್ಕೆ ಕಾರಣವಾಗಿದೆ. ಇದಕ್ಕೆ ಚಿಕಿತ್ಸೆ ಆವಿಷ್ಕಾರ ಮಾಡಿದ್ದರೂ ಇನ್ನೂ ಪರಿಪೂರ್ಣ ಎನಿಸಿಲ್ಲ. ಕಾಯಿಲೆ ಬಂದ ನಂತರ ಹಿಂಸೆ ಅನುಭವಿಸುವ ಬದಲು ಮುಂಜಾಗ್ರತೆ ವಹಿಸಬೇಕು. 12ರಿಂದ 30 ವರ್ಷದೊರೆಗಿನ ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಬಾರದಂತೆ ಡೆಂಡ್ರಿಟಿಕ್ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ವಿವಿಧ ರೀತಿಯ ಕ್ಯಾನ್ಸರ್‌ಗಳಿದ್ದು, ಅವು ದೇಹದ ಯಾವುದೇ ಭಾಗದಲ್ಲಿ ಕಂಡುಬರಬಹುದು. ಕುಡಿತ, ಗುಟ್ಕಾ-ತಂಬಾಕು ಸೇವನೆ ಮುಂತಾದ ದುಶ್ಚಟಗಳಿಂದ ದೂರವಿರಬೇಕು. ಮುನ್ನೆಚ್ಚರಿಕೆ ಕ್ರಮ ಹಾಗೂ ರೋಗದ ಲಕ್ಷಣ ಕಂಡ ಕೂಡಲೇ ತಪಾಸಣೆ ಮಾಡಿಸಬೇಕು ಎಂದರು.
ಗರ್ಭಾಶಯ ಕೊರಳಿನ ಕ್ಯಾನ್ಸರ್ ಸಣ್ಣ ವಯಸ್ಸಿನಲ್ಲಿ ಮದುವೆ ಮತ್ತು ಮಕ್ಕಳು ಹೊಂದುವುದರಿಂದ ಬರುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ. ಇದನ್ನು ತಪಾಸಣೆ ನಡೆಸಿ ಆರಂಭದ ಹಂತದಲ್ಲೇ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ರೋಟರಿ ಸಂಸ್ಥೆಯ ಡಾ.ಎನ್.ಬಿ.ಸಜ್ಜನ್, 115 ವಯೋವೃದ್ಧರಿಗೆ ಊರುಗೋಲು ವಿತರಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಜಿ.ಪಿ.ಹರೀಶ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸರಿತಾ, ರೋಟರಿ ಸದಸ್ಯರಾದ ಕಾಟೇಹಳ್ಳಿ ಶಿವಕುಮಾರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಸಿ.ಗಂಗಾಧರಪ್ಪ, ಕ್ಲಬ್ ಸದಸ್ಯರಿದ್ದರು.