ಮಡಿಕೇರಿ: ಗ್ರಾಮ ಸಡಕ್ ಯೋಜನೆಯಡಿ ಹೊದವಾಡ ರಸ್ತೆಯನ್ನು ತಕ್ಷಣ ಡಾಂಬರೀಕರಣಗೊಳಿಸಬೇಕೆಂದು ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹೊದ್ದೂರು ಗ್ರಾ.ಪಂ ಗೆ ಸೇರಿದ ಹೊದವಾಡ ಗ್ರಾಮಕ್ಕೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಬಲಮುರಿಯಿಂದ ಹೊದವಾಡ ಶಾಲೆಗಾಗಿ ಕಾಮಗಾರಿ ನಡೆಯಬೇಕಾಗಿತ್ತು. ಆದರೆ ಬಲಮುರಿಯಿಂದ ನೇರವಾಗಿ ವಾಟೆಕಾಡು ಹೊದ್ದೂರು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದೇ ಯೋಜನೆಯಲ್ಲಿ ಸೇರಿರುವ ಹೊದವಾಡ ರಸ್ತೆಯನ್ನು ರಾಜಕೀಯ ದುರುದ್ದೇಶದಿಂದ ಡಾಂಬರೀಕರಣಗೊಳಿಸದೆ ಕಡೆಗಣಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಬಲಮುರಿ, ವಾಟೆಕಾಡು ಹೊದ್ದೂರು ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಹೊದವಾಡ ರಸ್ತೆಯನ್ನು ತಕ್ಷಣ ಡಾಂಬರೀಕರಣಗೊಳಿಸದಿದ್ದಲ್ಲಿ ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಹೊದವಾಡ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರತಿದಿನ ಸಂಚರಿಸುವ ಗ್ರಾಮಸ್ಥರು, ವಿದ್ಯಾರ್ಥಿಗಳು, ವಯೋವೃದ್ಧರಿಗೆ ತೊಂದರೆಯಾಗುತ್ತಿದೆ. ವಾಹನಗಳ ಸಂಚಾರ ಅಸಾಧ್ಯವಾಗಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಗ್ರಾಮದ ಎಲ್ಲಾ ಜನರು ಖಂಡಿಸುವುದಾಗಿ ಹೇಳಿದರು.
ಹೊದವಾಡ ಕಾಮಗಾರಿಯನ್ನು ಪೂರ್ಣಗೊಳಿಸದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದು ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆ ತಡೆ ಪ್ರತಿಭಟನೆ ನಡೆಸುವುದಲ್ಲದೆ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತಿಳಿಸಿದರು.
ಹೈದ್ರೂಸ್ ಜುಮಾ ಮಸೀದಿ ಅಧ್ಯಕ್ಷರಾದ ಹಂಸ ಮುಸ್ಲಿಯಾರ್ ಟಿ.ಎಂ, ಗ್ರಾ.ಪಂ ಮಾಜಿ ಸದಸ್ಯ ಮುಹಮ್ಮದ್ ಶಾಫಿ ಪಿ.ಎ, ಬೋಪಣ್ಣ ಸಿ.ಎನ್, ಮುಹಮ್ಮದ್ ಸಿನಾನ್ ಟಿ.ಹೆಚ್, ಅಯ್ಯಪ್ಪ ಚೌರಿರ, ಅಹಮ್ಮದ್ ಪಿ.ಯು, ಸುಲೈಮಾನ್ ಬಿ.ಎಸ್, ಹಸನ್ ಸಿ.ಕೆ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.