ಮಡಿಕೇರಿ:
ಕ್ರೀಡಾ ತವರು ಕೊಡಗಿನಲ್ಲಿ ಕಳೆದ 2 ದಿನಗಳಿಂದ ಹಾಕಿ ಜ್ವರ ಕಂಡು ಬರುತ್ತಿದ್ದು, ಮೋಡ ಮತ್ತು ಚುಮು ಚುಮು ಚಳಿಯ ಮಧ್ಯೆ ಶುಕ್ರವಾರವೂ ದೇಶದ ವಿವಿಧೆಡೆಯಿಂದ ಆಗಮಿಸಿದ ತಂಡಗಳು 17ರ ವಯೋಮಾನದ ಬಾಲಕಿಯರ ರಾಷ್ಟ್ರೀಯ
ಹಾಕಿ ಪಂದ್ಯಾವಳಿಯಲ್ಲಿ ಸೆಣೆಸಾಡಿದವು. ಬೆಳಗ್ಗೆ ನಡೆದ ಲೀಗ್ ಪಂದ್ಯಾವಳಿಯಲ್ಲಿ ಆತಿಥೇಯ ಕರ್ನಾಟಕ ಕೇಂದ್ರೀಯ ವಿದ್ಯಾಲಯ ತಂಡದ ಎದುರು ಭರ್ಜರಿ 11-0 ಗೋಲುಗಳ ಅಂತರದಿಂದ ಜಯ ದಾಖಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಮಧ್ಯಾಹ್ನ ನಂತರ ಪ್ರೀ ಕ್ವಾರ್ಟರ್ ಪಂದ್ಯಾವಳಿಗಳು ನಡೆದವು. ಯಾವ ಪಂದ್ಯಗಳಲ್ಲೂ ಸಮಬಲದ ಹೋರಾಟ ಕಂಡುಬರಲಿಲ್ಲ.
ಮಡಿಕೇರಿ ಸಾಯಿ ಟರ್ಫ್ ಮೈದಾನದಲ್ಲಿ ಶುಕ್ರವಾರ ಗೋಲುಗಳ ಸುರಿಮಳೆಯೇ ಕಂಡು ಬಂತು. ಬೆಳಗ್ಗೆ ಲೀಗ್ ಪಂದ್ಯಾವಳಿಗಳು ನಡೆವು. ನವೋದಯ ವಿದ್ಯಾಲಯ ಮತ್ತು ಪುದುಚೇರಿ ನಡುವಿನ ಪಂದ್ಯದಲ್ಲಿ 5-0 ಗೋಲುಗಳಿಂದ ಪುದುಚೇರಿ ತಂಡ ಜಯ ಸಾಧಿಸಿತು. ತಂಡದ ಪರ 9 ಮತ್ತು 25ನೇ ನಿಮಿಷದಲ್ಲಿ ಯುವಶ್ರೀ ಎಸ್., 18ನೇ ನಿಮಿಷದಲ್ಲಿ ತಮಿಝಾನ್ ಹಾಗೂ 29 ಮತ್ತು 38ನೇ ನಿಮಿಷದಲ್ಲಿ ಕರೀಷ್ಮಾ ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಂಜಾಬ್ ಮತ್ತು ಚತ್ತೀಸ್‌ಗಡ ನಡುವಿನ ಪಂದ್ಯದಲ್ಲಿ 6-1 ಗೋಲುಗಳಿಂದ ಪಂಜಾಬ್ ಗೆಲುವು ಸಾಧಿಸಿತು. ಪಂಜಾಬ್ ಪರ 4,12,14 ಹಾಗೂ 26ನೇ ನಿಮಿಷದಲ್ಲಿ ಮಸ್‌ಬೀನ್ ಪ್ರೀತ್ ಗೋಲು ಹೊಡೆದು ಮಿಂಚಿದರು. 6ನೇ ನಿಮಿಷದಲ್ಲಿ ನವಜೋತ್ ಕೌರ್ ಹಾಗೂ 35ನೇ ನಿಮಿಷದಲ್ಲಿ ಮನ್‌ದೀಪ್ ಕೌರ್ ಅವರಿಂದ ಗೋಲು ದಾಖಲಾಯಿತು.
ಕರ್ನಾಟಕ ಮತ್ತು ಕೇಂದ್ರೀಯ ವಿದ್ಯಾಲಯ ತಂಡದ ನಡುವಿನ ಪಂದ್ಯದಲ್ಲಿ ಕರ್ನಾಟಕ ಬರೋಬ್ಬರಿ 11-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ತಂಡದ ಪರ ಅಕ್ಷರ ತಿಮ್ಮಯ್ಯ ಭರ್ಜರಿಯಾಗಿ 5 ಗೋಲುಗಳನ್ನು 17, 18, 24, 32 ಹಾಗೂ 33ನೇ ನಿಮಿಷದಲ್ಲಿ ಹೊಡೆದರು. ಪ್ರತಿಕಾ ವಿ.ಬಿ. 6 ಮತ್ತು 25ನೇ ನಿಮಿಷದಲ್ಲಿ, ಚೈತನ್ಯಾ ಡಿ.ಯು. 19 ನಿಮಿಷದಲ್ಲಿ, ದೀಪಿಕಾ ಆರ್, 20ನೇ ನಿಮಿಷದಲ್ಲಿ, ಪುಣ್ಯ ಎಸ್.ಆರ್. 28ನೇ ನಿಮಿಷದಲ್ಲಿ ಹಾಗೂ ಪ್ರಿನ್ಸಿಯಾ ಅಗ್ನೇಶ್ 38ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಪಂಜಾಬ್ ಮತ್ತು ಮಹಾರಾಷ್ಟ್ರ ನಡುವಿನ ಹಣಾಹಣಿಯಲ್ಲಿ ಪಂಜಾಬ್ 3-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. 27 ನೇ ನಿಮಿಷದಲ್ಲಿ ಮಸ್‌ಬೀನ್‌ಪ್ರೀತ್ ಕೌರ್, 42ನೇ ನಿಮಿಷದಲ್ಲಿ ಹರ್‌ಪ್ರೀತ್ ಕೌರ್ ಹಾಗೂ 48ನೇ ನಿಮಿಷದಲ್ಲಿ ಹರ್ಮನ್ ರೆಭಿ ತಂಡದ ಪರ ಗೋಲು ದಾಖಲಿಸಿದರು.
ಕರ್ನಾಟಕ ಮತ್ತು ಚತ್ತೀಸ್‌ಗ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ 6-0 ಗೋಲುಗಳಿಂದ ಜಯ ದಾಖಲಿಸಿತು. ಕರ್ನಾಟಕ ಪರ ಪ್ರಿನ್ಸಿಯಾ ಅಗ್ನೇಶ್ 9ನೇ ನಿಮಿಷದಲ್ಲಿ, ಪ್ರತಿಕಾ ವಿ.ಬಿ. 19 ಮತ್ತು 20ನೇ ನಿಮಿಷದಲ್ಲಿ, ಅಕ್ಷರಾ ಬಿ. 47ನೇ ನಿಮಿಷದಲ್ಲಿ, ಚೈತನ್ಯಾ ಯು.ಡಿ. 52ನೇ ನಿಮಿಷದಲ್ಲಿ ಹಾಗೂ ದೇಚಕ್ಕ 54ನೇ ನಿಮಿಷದಲ್ಲಿ ಗೋಲು ಹೊಡೆದರು.
ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ನಡೆದ ಮಧ್ಯಪ್ರದೇಶ ಮತ್ತು ಚಂಡೀಗಢ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ಮಧ್ಯಪ್ರದೇಶಕ್ಕೆ ಗೆಲುವು ಸಾಧಿಸಿತು. ತೆಲಂಗಾಣ ಮತ್ತು ವಿದ್ಯಾಭಾರತಿ ನಡುವಿನ ಪಂದ್ಯದಲ್ಲಿ ತೆಲಂಗಾಣ 7-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶ ನಡುವಿನ ಪಂದ್ಯ ಯಾವುದೇ ಗೋಲುಗಳಿಲ್ಲದೆ ಡ್ರಾದಲ್ಲಿ ಅಂತ್ಯವಾಯಿತು. ಮಧ್ಯಾಹ್ನ ನಂತರ ನಡೆದ ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ ನಡುವಿನ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಮಧ್ಯಪ್ರದೇಶ 8-0 ಗೋಲುಗಳ ಜಯ ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು. ಚಂಡಿಗಡ ಮತ್ತು ಉತ್ತರ ಪ್ರದೇಶ ಮಧ್ಯೆ ನಡೆದ ಮತ್ತೊಂದು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಉತ್ತರಪ್ರದೇಶದ ವಿರುದ್ಧ 6-1 ಗೋಲುಗಳ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಹೆಜ್ಜೆ ಇಟ್ಟಿತು.
ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹರ್ಯಾಣ ಮತ್ತು ದೆಹಲಿ ನಡುವೆ ನಡೆದ ಪಂದ್ಯದಲ್ಲಿ ಹರ್ಯಾಣ ತಂಡ 5-0 ಗೋಲುಗಳ ಗೆಲುವು ದಾಖಲಿಸಿತು. ಒಡಿಸ್ಸಾ ಮತ್ತು ತಮಿಳುನಾಡು ನಡುವಿನ ಪಂದ್ಯದಲ್ಲಿ ಒಡಿಸ್ಸಾಕ್ಕೆ 3-1 ಗೋಲುಗಳ ಗೆಲುವು ಪಡೆಯಿತು. ಮಧ್ಯಾಹ್ನ ನಂತರ ನಡೆದ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಮಣಿಪುರ ತಂಡ ಹರಿಯಾಣ ತಂಡದ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಒಡಿಸ್ಸಾ ಮತ್ತು ಡೆಲ್ಲಿ ಮಧ್ಯೆ ಇಲ್ಲಿ ನಡೆದ ಮತ್ತೊಂದು ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಒಡಿಸ್ಸಾ 5-0 ಗೋಲುಗಳ ಜಯ ದಾಖಲಿಸಿತು.
ಕೂಡಿಗೆ ಕ್ರೀಡಾ ಶಾಲೆ ಟರ್ಪ್ ಮೈದಾನದಲ್ಲಿ ನಡೆದ ಮೊದಲ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಾಸ್ತಾನ ವಿರುದ್ಧ ಕೇರಳ 3-0 ಗೋಲುಗಳ ಜಯ ಸಾಧಿಸಿತು. ಜಾರ್ಖಂಡ್ ಮತ್ತು ಬಿಹಾರ ನಡುವಿನ ಪಂದ್ಯದಲ್ಲಿ ಜಾರ್ಖಂಡ್ 8-0 ಗೋಲುಗಳಿಂದ ವಿಜಯಿಯಾಯಿತು. ಮತ್ತೊಂದು ಪಂದ್ಯದಲ್ಲಿ ದೆಹಲಿ ವಿರುದ್ದ ಒಡಿಸ್ಸಾ 5 ಗೋಲುಗಳಿಂದ ಗೆಲುವು ಸಾಧಿಸಿತು.
ಶುಕ್ರವಾರ ನಡೆದ ಪ್ರೀಕ್ವಾರ್ಟರ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಪಂಜಾಬ್, ಕರ್ನಾಟಕ, ಮಣಿಪುರ, ಮಧ್ಯಪ್ರದೇಶ, ಚಂಡೀಗಡ, ಕೇರಳ, ಜಾರ್ಖಂಡ್ ಹಾಗೂ ಒಡಿಸ್ಸಾ ರಾಜ್ಯದ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದವು.