ಮಂಡ್ಯ: ಮಕ್ಕಳ ದೈಹಿಕ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಕ್ರೀಡೆ ಅತ್ಯಾವಶ್ಯಕ ಎಂದು ತಾಲೂಕು ಶಿಕ್ಷಣಾಧಿಕಾರಿ ಸುರೇಶ್ ತಿಳಿಸಿದರು.
ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಮನಸ್ಸಿನ ಸದೃಢತೆ ಕಾಪಾಡುವಲ್ಲಿ ಕ್ರೀಡಾ ಚಟುವಟಿಕೆ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಸಂಘದ ಅಧ್ಯಕ್ಷ ಜಯಸ್ವಾಮಿ ಮಾತನಾಡಿ, ಕ್ರೀಡೆ ಕಲಿಕೆಯಂತೆಯೇ ಮುಖ್ಯವಾಗಿದೆ. ಆದ್ದರಿಂದ ಸೋಲು ಗೆಲುವಿನ ಆಲೋಚನೆ ಬಿಟ್ಟು ಕ್ರೀಡಾಭ್ಯಾಸವನ್ನು ಭಾಗವಹಿಸಬೇಕು. ಇದರಿಂದ ಮಾನಸಿಕ ದೃಢತೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಎಸ್‌ಡಿಸಿಎಂಸಿ ಅಧ್ಯಕ್ಷ ಡಿ.ಕೆ.ಸುರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ ಕುಮಾರ್, ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರವೀಶ್, ಕೆಪಿಎಸ್ಸಿ ಶಾಲೆಯ ಪ್ರಾಂಶುಪಾಲೆ ನಂಜಮಣಿ, ಹಿರಿಯ ಶಿಕ್ಷಕ ಗಿರೀಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್, ಸಿಆರ್‌ಸಿ ಸಂಯೋಜಕರಾದ ಎಂ.ಎನ್.ಸುರೇಶ್, ಉಗ್ರೇಗೌಡ, ಶಿವಸ್ವಾಮಿ, ವಿರೂಪಾಕ್ಷ, ಸುರೇಶ್ ಇತರರಿದ್ದರು.