ಜಿಲ್ಲೆ

ಮನೆಯಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹ ಪತ್ತೆ

ಕಾಸರಗೋಡು: ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಿಕುಳಂನ ಬೀಗ ಹಾಕಲಾಗಿದ್ದ ಮನೆಯೊಳಗೆ ಪ್ರಾಚೀನ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ರಹಸ್ಯ ಮಾಹಿತಿಯನ್ವಯ ಬೇಕಲ ಠಾಣಾ ಇನ್‌ಸ್ಪೆಕ್ಟರ್ ಎಂ.ವಿ.ಶ್ರೀದಾಸ್, ಎಸೈ ಸವ್ಯಸಾಚಿ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹ ಪತ್ತೆ ಹಚ್ಚಲಾಗಿದೆ. ಕಂಚಿನ ಪಾತ್ರೆಗಳು, ಪ್ರಾಚೀನ ಕಾಲ್ಗೆಜ್ಜೆಗಳು, ಖಡ್ಗ ಇದರಲ್ಲಿದೆ. ಕೆಲವು ಸಾಮಗ್ರಿಗಳಲ್ಲಿ ಅರೆಬಿಕ್ ಅಕ್ಷರಗಳು ಕಂಡುಬಂದಿವೆ. ಮೈಸೂರು ಅರಮನೆಯಿಂದ ಸಾಗಿಸಿ ತಂದಿರುವುದೆನ್ನಲಾದ ಖಡ್ಗ ಇದಾಗಿದೆ ಎಂದೂ ಶಂಕಿಸಲಾಗಿದೆ. ಕೊಠಡಿ ತಪಾಸಣೆ ವೇಳೆ ಹಾವು ಪ್ರತ್ಯಕ್ಷವಾಗಿದ್ದು, ಇದರಿಂದ ಕೊಠಡಿ ಬಾಗಿಲು ತೆರೆಯದೆ ಹಲವು ಸಮಯವಾಗಿರಬೇಕೆಂದೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಕೊಠಡಿಗೆ ಬೀಗಜಡಿದು ಮೊಹರು ಹಾಕಲಾಗಿದ್ದು, ಪ್ರಾಚ್ಯವಸ್ತು ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರ ಮಾರ್ಗದರ್ಶನದ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.