ಹನೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜು.31 ರಂದು ಹನೂರಿನ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್‌ಖಾನ್ ತಿಳಿಸಿದರು.
ಪಟ್ಟಣದ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಕಚೇರಿಗೆ ಸೋಮವಾರ ಪದಾಧಿಕಾರಿಗಳೊಂದಿಗೆ ಆಗಮಿಸಿ ಪ್ರತಿಭಟನೆ ಸಂಬಂಧ ಎಸಿಎಫ್ ಉಮಾಪತಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಹನೂರು ಭಾಗವು ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿದ್ದು, ಇಲ್ಲಿನ ರೈತರು ಕೃಷಿಯ ಜತೆಗೆ ನಾಟಿ ಹಸುಗಳನ್ನು ಸಾಕುವ ಮೂಲಕ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇತ್ತ ಅರಣ್ಯ ವಾಸಿಗಳಿಗೆ ಅಗತ್ಯ ಮೂಲ ಸೌಕರ್ಯವಿಲ್ಲ. ಅರಣ್ಯ ಇಲಾಖೆಯ ಕೆಲ ಅವೈಜ್ಞಾನಿಕ ನಿಯಮಗಳಿಂದ ರೈತರು ತೊಂದರೆಯನ್ನು ಅನುಭವಿಸುವಂತಾಗಿದೆ. ಹಾಗಾಗಿ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿಸಲು ನಿರ್ಧರಿಸುವುದನ್ನು ಸರ್ಕಾರ ಕೈ ಬಿಡಬೇಕು. ಅರಣ್ಯ ಪ್ರದೇಶದೊಳಗೆ ಎಂದಿನಂತೆ ಜಾನುವಾರುಗಳು ಮೇಯಿಸಲು ಮುಕ್ತ ಅವಕಾಶ ನೀಡಬೇಕು. ಪಾರಂಪರಿಕ ಅರಣ್ಯ ವಾಸಿಗಳ ಗ್ರಾಮಗಳಿಗೆ 2006ರ ಅರಣ್ಯ ಹಕ್ಕು ಕಾಯ್ದೆ ಅನ್ವಯ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಅರಣ್ಯ ವಾಸಿಗಳ ಜಮೀನುಗಳಿಗೆ ಹಕ್ಕು ನೀಡಬೇಕು. ಕಾಡು ಪ್ರಾಣಿಗಳಿಂದಾಗುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಕಾಡಂಚಿನ ಗ್ರಾಮಗಳಲ್ಲಿ ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ಹೂಗ್ಯಂ ವಲಯದಲ್ಲಿ ವಶಕ್ಕೆ ಪಡೆದಿರುವ ಜಮೀನನ್ನು ರೈತರಿಗೆ ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಕೂಡಲೂರು ವೆಂಕಟಾಚಲ, ಸೋಮಣ್ಣ, ಶಿವಣ್ಣ ಹಾಗೂ ನಾಗರಾಜು ಇದ್ದರು.