ಜಿಲ್ಲೆ

ನಿಸರ್ಗ ನಾಶದಿಂದ ತಾಪಮಾನ ಏರುಪೇರು

ಎ. ಆರ್. ರಘುರಾಮ

ಹೊಳೆನರಸೀಪುರ : ನಿಸರ್ಗ ನಾಶದಿಂದ ಜಾಗತಿಕ ತಾಪಮಾನದಲ್ಲಿ ಏರುಪೇರು ಆಗುತ್ತಿದೆ. ಹಾಗಾಗಿ ಪ್ರಕೃತಿ ಸಂರಕ್ಷಣೆಗೆ ಎಲ್ಲರೂ ಮಹತ್ವ ನೀಡಬೇಕು ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ಸಲಹೆ ನೀಡಿದರು. ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಂದು ಸಾವಿರ ಗಿಡ ನೆಡುವ ವಾರ್ಷಿಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ತಾಪಮಾನ ನಿರೀಕ್ಷಿಸಲಾಗದ ರೀತಿಯಲ್ಲಿ ದಾಖಲಾಗುತ್ತಿರುವುದು ಆತಂಕಕಾರಿಯಾಗಿದೆ. ರಾಜಧಾನಿ ದೆಹಲಿಯೇ ಇದಕ್ಕೆ ಪ್ರಮುಖ ಉದಾಹರಣೆ. ಈ ಪರಿಸ್ಥಿತಿ ಮುಂದೆ ನಮ್ಮ ಊರುಗಳಲ್ಲೂ ಎದುರಾಗಬಹುದು. ಹಾಗಾಗಿ ಗಿಡಗಳನ್ನು ನೆಟ್ಟು ಬೆಳೆಸಲು ಮುಂದಾಗಿ ಎಂದು ಅವರು ಸಲಹೆ ನೀಡಿದರು. ಪರಿಸರ ದಿನದಂದು ಮಾತ್ರ ಸಸಿ ನೆಟ್ಟು ಪ್ರಚಾರ ಪಡೆದರೆ ಸಾಲದು. ಒಬ್ಬೊಬ್ಬರು ಒಂದೊಂದು ಸಸಿನೆಟ್ಟು ನೀರುಣಿಸಿ, ಪೋಷಿಸಿ ಅದನ್ನು ಮರವನ್ನಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಗಿಡ ಮರಗಳು ನಮ್ಮ ಜೀವನಕ್ಕೆ ಅವಶ್ಯವಾದ ಆಮ್ಲಜನಕ ನೀಡುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದರು.