ಜಿಲ್ಲೆ

ವ್ಯಕ್ತಿತ್ವ ರೂಪಿಸಲು ಗ್ರಾಮ ಜೀವನ ಸಹಕಾರಿ

ಎ. ಆರ್. ರಘುರಾಮ

ಹಂಗರಹಳ್ಳಿಯಲ್ಲಿ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ

ಹೊಳೆನರಸೀಪುರ: ಗ್ರಾಮ ಜೀವನವು ವಿದ್ಯಾರ್ಥಿಗಳಿಗೆ ಬದುಕಿನ ಕ್ರಮವನ್ನು ಕಲಿಸಿ ವ್ಯಕ್ತಿತ್ವ ರೂಪಿಸುತ್ತದೆ ಎಂದು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮಣ ಹೇಳಿದರು. ತಾಲೂಕಿನ ಹಳೆಕೋಟೆ ಹೋಬಳಿ ಹಂಗರಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಆವರಣದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳನ್ನು ಹಳ್ಳಿಗಳಲ್ಲೇ ಹಮ್ಮಿಕೊಳ್ಳುವುದರಿಂದ ಸ್ವಯಂ ಸೇವಕರಲ್ಲಿ ಶಿಸ್ತು ಪರಿಪಾಲನೆ, ಸಮಯದ ಮಹತ್ವದೊಂದಿಗೆ ಶ್ರಮಿಕ ಜೀವನದ ದರ್ಶನವಾಗುತ್ತದೆ. ಗ್ರಾಮದ ಕೃಷಿ ಚಟುವಟಿಕೆಗಳು, ಸ್ವಚ್ಛತೆ ಪಾಲನೆ, ಸಹ ಜೀವನದ ಮಹತ್ವ ತಿಳಿಯುತ್ತದೆ ಎಂದರು.

ಉದ್ಯಮಿ ಎಚ್.ವಿ. ವಾಸು ಮಾತನಾಡಿ ಶಿಬಿರಾರ್ಥಿಗಳು ತಮ್ಮ ಜ್ಞಾನವನ್ನು ಗ್ರಾಮಸ್ಥರಲ್ಲಿ ಹಂಚಿಕೊಂಡು ಜಾಗೃತಿ ಮೂಡಿಸಬೇಕು.

ಹಳ್ಳಿಗಾಡಿನ ಬದುಕಿನಿಂದಲೂ ಪಾಠ ಕಲಿಯಬೇಕು. ಆಗ ಶಿಬಿರ ಸಾರ್ಥಕವಾಗಲಿದೆ ಎಂದರು. ಪುರಸಭೆ ಅಧ್ಯಕ್ಷ ಎಚ್.ಕೆ. ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮಾತನಾಡಿದರು. ಶಿಬಿರಾರ್ಥಿ ಎಂ.ಕುಸುಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಎನ್ನೆಸ್ಸೆಸ್ ನಡೆದು ಬಂದ ಹಾದಿ ಮತ್ತು ಧ್ಯೇಯೋದ್ದೇಶಗಳನ್ನು ತಿಳಿಸಿದರು. ಸಹ ಶಿಬಿರಾರ್ಥಿ ಚಂದ್ರಕಲಾ ಹಾಗೂ ಶಿಬಿರಾರ್ಥಿಗಳು ಇದ್ದರು.

ಗುರುವಾರ ಬೆಳಗಿನಿಂದಲೇ ಹಸಿರೇ ಉಸಿರು, ಪ್ಲಾಸ್ಟಿಕ್ ತ್ಯಜಿಸಿ ಜಾಥಾವನ್ನು ಗ್ರಾಮದಲ್ಲಿ ನಡೆಸಲಾಯಿತು. ಸಂಜೆ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಗುರುರಾಜ್, ಉಪನ್ಯಾಸಕರಾದ ತಿಪ್ಪೇಸ್ವಾಮಿ, ಸುರೇಶ, ಅನಂತ ಕುಮಾರ್, ಬಿ.ಟಿ. ಲೋಕೇಶ್, ಆಶಾ, ವಿದ್ಯಾ ವೆಂಕಟೇಶ್, ಪಂಪಾಪತಿ ಮತ್ತು ಗ್ರಾಮಸ್ಥರು ಹಾಜರಿದ್ದರು.