ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ. ಶೇ.4 ರಷ್ಟು ಮಹಿಳೆಯರ ಮತದಾನ, ಶೇ.2 ರಷ್ಟು ಪುರುಷರ ಮತದಾನ ಅಧಿಕಗೊಂಡಿದೆ. ಈ ಚುನಾವಣೆಯು ಗ್ಯಾರಂಟಿ ಯೋಜನೆಗಳ ಜನಾಭಿಪ್ರಾಯ ಆಗಲಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆ ಶ್ರೀಮಂತ ಮತ್ತು ಬಡವರ ನಡುವಿನ ಚುನಾವಣೆ ಆಗಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷ 1.50 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದೆ. ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಎಲ್ಲ ವಿಷಯಗಳನ್ನು ಚಚಿರ್ಸಲಾಗಿ, ಈ ಬಾರಿ ಗದಗ&ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸತ್ ಗೆ ಪ್ರತಿನಿಧಿ ಆಯ್ಕೆ ಆಗುತ್ತಾರೆ. ಕೇವಲ ಗದಗ ಮತ ಕ್ಷೇತ್ರ ಒಂದರಲ್ಲೇ 25 ಸಾವಿರ ಮತಗಳ ಲೀಡ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಚುನಾವಣೆಯಲ್ಲಿ ಕಾರ್ಯಕರ್ತರು, ಮತದಾರರು ತಮ್ಮ ಪ್ರಭುದ್ದತೆ ಮೆರೆದಿದ್ದಾರೆ. ಯಾವುದೇ ಗಲಾಟೆ ಗದ್ದಲಗಳಿಲ್ಲದೆ, ದೂರುಗಳಿಲ್ಲದೇ ಮತದಾನ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ 12 ಕ್ಷೇತ್ರಗಳನ್ನು ಗೆಲ್ಲಲ್ಲಿದ್ದೇವೆ ಎಂದರು.
ಪ್ರಜ್ವಲ್ ಪ್ರಕರಣ:
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ ಐ ಟಿ ತಂಡ ರಚನೆ ಮಾಡಲಾಗಿದೆ. ಪ್ರಕರಣದಲ್ಲಿ ನೊಂದ ಮಹಿಳೆಯರನ್ನು ಹೆದರಿಸಿ ಸಾಕ್ಷಿಗಳನ್ನು ನಾಶ ಪಡಿಸುವ ಟನೆಗಳನ್ನು ಎಸ್ ಐ ಟಿ ತನಿಖೆಯಲ್ಲಿ ಗೊತ್ತಾಗಿದೆ. ಮಹಿಳೆಯರ ರಕ್ಷಣೆ ಮತ್ತು ಮಾಹಿತಿಗಳ ಗೌಪ್ಯತೆ ಕಾಪಾಡುವ ಹಿನ್ನೆಲೆ ಕೋರ್ಟ್ ಸ್ಥಳಾಂತರಿಸಲು ಕೋರಲಾಗಿತ್ತು. ಬೆಂಗಳೂರಿನ ಗುರುನಾನಕ ಭವನಕ್ಕೆ ಎಸ್ ಐಟಿ ಸಂಬಂಧಿಸಿದ ಕೋರ್ಟ್ ಸ್ಥಳಾಂತರಿಸಲಾಗಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.
ಕುಡಿಯುವ ನೀರಿನ ಸ್ಥಿತಿ ಗಂಭೀರ:
ನದಿ ಪಾತ್ರದ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಡೆಡ್ ಸ್ಟೋರೇಜ್ ನಿಂದ ನಗರಕ್ಕೆ ನೀರು ಪೂರೈಕೆ ಆಗುತ್ತಿದೆ. ಗದಗ ನಗರದಲ್ಲಿ ಅಂತರ್ಜಲ ಮಟ್ಟದ ಸಮಸ್ಯೆ ಇಲ್ಲ. ಭದ್ರಾ ಜಲಾಶಯದಿಂದ ನೀರು ಹರಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಅದಾನಿ ಅಂಬಾನಿ ಬಂಧಿಸಿ:
ಕಾಂಗ್ರೆಸ್ ಪಕ್ಷ ಅದಾನಿ ಅಂಬಾನಿ ಅವರಿಂದ ಹಣ ಪಡೆದುಕೊಂಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, ಕೇಂದ್ರದ ಬಳಿ ಪುರಾವೆಗಳಿದ್ದರೆ ಅದಾನಿ ಅಂಬಾನಿ ಅವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ಏಕೆ ಸುಮ್ಮನಿದ್ದಾರೆ? ಕಾಂಗ್ರೆಸ್ ಹಣ ಪಡೆದುಕೊಂಡ ಬಗ್ಗೆ ಪುರಾವೆ ಇದ್ದರೆ ಮಾತ್ರ ಆರೋಪಿಸಬೇಕು. ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಸ್ಪಷ್ಟ ಪಡಿಸಿದರು.