ಜಿಲ್ಲೆ

27ನೇ ವಾರ್ಡ್ನಲ್ಲಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಸಚಿವ ಎಚ್.ಕೆ. ಪಾಟೀಲ ಪ್ರಚಾರ

Gadag - Shivanand Hiremath

ಗದಗ: ದೇಶದ ಸಂವಿಧಾನವನ್ನು ಬದಲಾವಣೆಗೊಳಿಸುವುದಾಗಿ ಹೇಳಿಕೆ ನೀಡುತ್ತಿರುವ ಬಿಜೆಪಿ ಸರಕಾರವನ್ನು ಕಿತ್ತೆಸೆದು, ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನವನ್ನು ರಕ್ಷಿಸಲು ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ 27ನೇ ವಾರ್ಡಿನ ಕಾಶೀ ವಿಶ್ವನಾಥ ನಗರದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯು ಮಹತ್ವದ ಚುನಾವಣೆಯಾಗಿದೆ. ಬದುಕು-ಭಾವನೆಗಳ, ಬಡವರು-ಶ್ರೀಮಂತರ ನಡುವಿನ ಚುನಾವಣೆಯಾಗಿದೆ. ಆದ್ದರಿಂದ ಭಾವನೆಗಳ ಜೊತೆಗೆ ಆಟವಾಡುವ ಮೂಲಕ ಜಾತಿಜಾತಿಗಳ ನಡುವೆ, ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿರುವ ಬಿಜೆಪಿಯನ್ನು ತಿರಸ್ಕರಿಸಿ, ಬಡವರ ಬದುಕನ್ನು ಉಜ್ವಲಗೊಳಿಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಜಿಎಸ್‌ಟಿ ರೂಪದಲ್ಲಿ ಕೇಂದ್ರ ಸರಕಾರಕ್ಕೆ ತುಂಬಿದ ಟ್ಯಾಕ್ಸ್ನ ಮರುಪಾವತಿಯಲ್ಲಿ ಕೇಂದ್ರವು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಕರ್ನಾಟಕ ಸರಕಾರಕ್ಕೆ 100ಕ್ಕೆ 13 ರೂ. ನೀಡಿದರೆ, ಉತ್ತರ ಪ್ರದೇಶಕ್ಕೆ 100ಕ್ಕೆ 2215 ರೂ., ಮಧ್ಯಪ್ರದೇಶಕ್ಕೆ 100ಕ್ಕೆ 1120 ರೂ. ನೀಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.  
ರಾಜಕೀಯ ಪಕ್ಷಗಳು ವಕೀಲರಿದ್ದಂತರ, ಮತದಾರರು ನ್ಯಾಯಾಧೀಶರಿದ್ದಂತೆ. ನಾವು ನಮ್ಮ ಕೆಲಸಗಳು, ಯೋಜನೆಗಳು, ಗ್ಯಾರಂಟಿ ಕಾರ್ಡ್, ರೈತರ ಸಾಲ ಮನ್ನಾ ಸೇರಿ ಇತರೆ ಅಭಿವೃದ್ಧಿ ಕೆಲಸಗಳ ಕುರಿತು ವಕಾಲತ್ತು ಮಾಡಿದ್ದೇವೆ. ನೀವು ನಮ್ಮ ಕೆಲಸಗಳ ಆಧಾರದ ಮೇಲೆ ತೀರ್ಪು ನೀಡಬೇಕು ಎಂದು ಹೇಳಿದರು.
27ನೇ ವಾರ್ಡಿನ ರತ್ನಮ್ಮ, ಮಲ್ಲಮ್ಮ ಅವರು ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಚುನಾವಣೆಯ ಖರ್ಚಿಗಾಗಿ ತಲಾ 2,000 ರೂ. ದೇಣಿಗೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ ಅವರು ಆನಂದಸ್ವಾಮಿ ಗಡ್ಡದೇವರಮಠ ಅವರು ಚುನಾವಣೆ ಖರ್ಚು ನೀಗಿಸುವಲ್ಲಿ ಸಮರ್ಥರಿದ್ದಾರೆ. ಆದ್ದರಿಂದ ಚುನಾವಣೆ ದಿನ ವಾರ್ಡಿನ ದುರಗಮ್ಮ ಹಾಗೂ ದ್ಯಾಮವ್ವ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಮಾಡಲು ಓಣಿಯ ಮುಖಂಡರಿಗೆ ಹಣವನ್ನು ಹಸ್ತಾಂತರಿಸಿದರು. ನಂತರ ಮಾತನಾಡಿದ ಸಚಿವರು ಬಡವರು ಚುನಾವಣೆ ಖರ್ಚಿಗೆ ಎರಡು ಸಾವಿರ ರೂ. ನೀಡಿರುವುದು ಅವರಿಗೆ ಕಾಂಗ್ರೆಸ್ ಮೇಲಿನ ಅಭಿಮಾನ ತಿಳಿಸುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಬಿಜೆಪಿಯವರು ತಮ್ಮ ರಾಜಕೀಯ ಸಾಧನೆಗಾಗಿ ಜಾತಿಜಾತಿಯೊಳಗೆ, ದರ್ಮಧರ್ಮದೊಳಗೆ ಬೆಂಕಿ ಹಚ್ಚಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಅವರಿಗೆ ತಾತ್ಕಾಲಿಕ ಜಯ ಸಿಕ್ಕಿರಬಹುದು ನಿಜ. ಆದರೆ, ಇನ್ನು ಮುಂದೆ ಹಾಗಾಗೋದಿಲ್ಲ ಇನ್ನು ಕಾಂಗ್ರೆಸ್ ದಿಗ್ವಿಜಯ ಸಾಧಿಸಲಿದೆ ಎಂದರು.
ನಗರಸಭೆ ಸದಸ್ಯೆ ಲಲಿತಾ ಅಸೂಟಿ, ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್ ಕೌತಾಳ, ಮುಖಂಡರಾದ ದುಂಡಪ್ಪ ಆಸಂಗಿ, ದೇವಪ್ಪ ಮಳಗಿ, ಶೇಖಪ್ಪ ಮುಳವಾಡ, ಚನ್ನವೀರ ಮಳಗಿ, ಬಸವಂತಪ್ಪ ಕಡಬಲಕಟ್ಟಿ, ಶಾಂತಪ್ಪ ಅಕ್ಕಿ, ಮಾಲಿಂಗಪ್ಪ, ರಮೇಶ ಅಣ್ಣಿಗೇರಿ, ಮಾಬುಸಾಬ್ ಸೇರಿ ಅನೇಕರು ಇದ್ದರು.