ಜಿಲ್ಲೆ

ಯುವಜನರಿಗೆ ಎಚ್‌ಐವಿ ಜಾಗೃತಿ ಅಗತ್ಯ

ವಸಂತಕುಮಾರ್ ಬಿ

ವಿರಾಜಪೇಟೆ: ಎಚ್‌ಐವಿ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ನಾವು ಇಡುವ ತಪ್ಪು ಹೆಜ್ಜೆಯಿಂದಾಗಿ ಮಾರಣಾಂತಿಕ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಲ್ದಾನ ಅಭಿಪ್ರಾಯಟ್ಟರು.

ಜಿಲ್ಲೆ ಏಡ್ಸ್ ನಿಯಂತ್ರಣ ಘಟಕ ಹಾಗೂ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಮತ್ತು ರೆಡ್ ರಿಬ್ಬನ್ ಘಟಕದ ವತಿಯಿಂದ ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಎಚ್‌ಐವಿ-ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲಿಗೆ ಎಚ್‌ಐವಿ ಸೋಂಕಿತ ವ್ಯಕ್ತಿಗೆ ಸಾವು ಬಿಟ್ಟರೆ ಬೇರೆ ಯಾವುದೇ ಮಾರ್ಗವಿರಲಿಲ್ಲ. ಆದರೆ ಇದೀಗ ವೈದ್ಯಕೀಯ ಸಂಶೋಧನೆಗಳ ಫಲವಾಗಿ ಎಚ್‌ಐವಿ ಸೋಂಕಿತ ವ್ಯಕ್ತಿಯ ಸಂಪೂರ್ಣ ಕಾಯಿಲೆಯಿಂದ ಮುಕ್ತರಾಗದಿದ್ದರೂ ಎಲ್ಲರಂತೆ ದೀರ್ಘ ಕಾಲ ಬದುಕಬಹುದಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಯುವಜನರು ಎಚ್‌ಐವಿ ಬಗ್ಗೆ ಜಾಗೃತರಾಗುವ ಜತೆಗೆ ಸಮುದಾಯದಲ್ಲೂ ಜಾಗೃತಿ ಮೂಡಿಸಬೇಕಿದೆ ಎಂದರು.

ಬಳಿಕ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂನ ರಶೀದಾ ಪ್ರಥಮ ಹಾಗೂ ಪ್ರಥಮ ಬಿಎ ವಿಭಾಗದ ಆದಿತ್ಯ ದ್ವಿತೀಯ ಸ್ಥಾನ ಪಡೆದರು. ಭಾಷಣ ಸ್ಪರ್ಧೆಯಲ್ಲಿ ಬಿಕಾಂನ ರಕ್ಷಿತಾ ಪ್ರಥಮ ಹಾಗೂ ಮುತ್ತಮ ದ್ವಿತೀಯ ಸ್ಥಾನ ಪಡೆದರು.

ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂನ ರಕ್ಷಿತಾ ಪ್ರಥಮ ಹಾಗೂ ಪ್ರಥಮ ಬಿ.ಎ ವಿಭಾಗದ ದೀಕ್ಷಾ ದ್ವಿತೀಯ ಸ್ಥಾನ, ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಿ.ಕಾಂನ ಬಿಂದ್ಯಾ ಪ್ರಥಮ ಸ್ಥಾನ ಹಾಗೂ ದ್ವಿತೀಯ ಬಿಕಾಂ ಮುತ್ತಮ್ಮ ದ್ವಿತೀಯ ಸ್ಥಾನವನ್ನು ಪಡೆದರು.

ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕಿ ಪ್ರಿಯಾ, ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಮುಖ್ಯಸ್ಥ ನಾಗರಾಜು, ಎನ್ನೆಸ್ಸೆಸ್ ಅಧಿಕಾರಿ ಸುನಿಲ್ ಇತರರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಘಟಕದ ಆಪ್ತ ಸಮಾಲೋಚಕ ಚಿಟ್ಟಿಯಪ್ಪ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಉಪನ್ಯಾಸಕರಾದ ಅಂಬಿಕಾ, ಅಕ್ಷಿತಾ ನಾಯ್ಕ , ನಿರ್ಮಿತಾ, ಬೊಜಮ್ಮ ಇತರರಿದ್ದರು.