ಗುಬ್ಬಿ: ಪಟ್ಟಣದ ತಹಸೀಲ್ದಾರ್ ಕ್ವಾರ್ರ್ಟಸ್ ಮುಂಭಾಗದ ಎಂ.ಜಿ.ರಸ್ತೆಯಲ್ಲಿ ಗುರುವಾರ ಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆಸಿ, ಬೈಕ್ ಸವಾರನನ್ನು ಕಾರಿನಿಂದ ಓಡಾಡಿಸಿಕೊಂಡು ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಬೈಕ್ ಸವಾರ ಬಚಾವ್ ಆಗಿದ್ದಾನೆ. ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನ ಸಮೀಪದ ನಿವಾಸಿ ಜಿ.ಎನ್.ಮನೋಜ್(29) ಕೊಲೆ ಸಂಚಿನ ಅಪಾಯದಿಂದ ಪಾರಾದವ. ಗುರುವಾರ ಮನೆಯಿಂದ ಬಸ್ ನಿಲ್ದಾಣದತ್ತ ಮನೋಜ್ನ ಬೈಕ್ಗೆ ಯುವಕರ ಗುಂಪು ಕಾರಿನಿಂದ ಡಿಕ್ಕಿಹೊಡೆಸಿದ್ದು, ಅಟ್ಯಾಕ್ ಮಾಡುವ ಸಂಚು ಅರಿತ ಮನೋಜ್ ಸ್ಥಳದಿಂದ ಓಡಿ ಮಾರುತಿನಗರ ಬಡಾವಣೆಯ ಸಹೋದರನ ಮನೆ ಸೇರಿದ. ಅಲ್ಲಿವರೆಗೂ ಬೆನ್ನತ್ತಿದ ಕಾರು, ಮನೆಯ ಮುಂದೆ ಕೆಲ ಹೊತ್ತು ನಿಂತಿತು. ಈ ವೇಳೆ ಮನೋಜ್ ಸಂಬಂಧಿಕರು ಕೂಗಾಡಿದ್ದು, ಬಳಿಕ ಅಪರಿಚಿತರು ಕಾರು ಚಲಾಯಿಸಿಕೊಂಡು ಹೋದರು ಎಂದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಮನೋಜ್ ಪ್ರಕರಣ ದಾಖಲಿಸಿದ್ದಾರೆ. ಅಪರ ಜಿಲ್ಲಾ ವರಿಷ್ಠಾಧಿಕಾರಿ ಮರಿಯಪ್ಪ, ಸಿಪಿಐ ಗೋಪಿನಾಥ್ ಸ್ಥಳ ಪರಿಶೀಲನೆ ನಡೆಸಿ, ತನಿಖೆಗೆ ತಂಡ ರಚಿಸಿದ್ದಾರೆ. ಕೆಲ ಸಿಸಿ ಕ್ಯಾಮರಾ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.