ಮೈಸೂರು: ವಾಸ್ತವಾಂಶವನ್ನು ತಿಳಿಸುವ ನಿಟ್ಟಿನಲ್ಲಿ ಚರಿತ್ರೆಯನ್ನು ಮರು ರಚಿಸಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಲೇಖಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿಯಲ್ಲಿ ಸಂಶೋಧಕ ಸಂತೋಷ ಹಾನಗಲ್ಲ ರಚಿತ ವೀರ ಸೌದಾಮಿನಿ ಕಿತ್ತೂರು ರಾಣಿ ಚೆನ್ನಮ ಚಿತ್ರ ಸಂಪುಟ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಾವು ಇಂದು ಯಾವ್ಯಾವುದೋ ಉದ್ದೇಶದ ಹುಸಿ ಚರಿತ್ರೆಯನ್ನು ನಂಬಿರುವುದರಿಂದ ನಾವು ವಾಸ್ತವಾಂಶ ತಿಳಿದುಕೊಳ್ಳಲಾಗದ ಅಜ್ಞಾನಕ್ಕೆ ಹೋಗುತ್ತೆವೆ. ಅಂತಹ ಚರಿತ್ರೆಯನ್ನು ತಿಳಿಸುವ ಮೂಲಕ ಮಕ್ಕಳಿಗೆ ಹಾಲುಣಿಸುವುದಕ್ಕಿಂತ ವಿಷ ಉಣಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಜವಾದ ಚರಿತ್ರೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಹಾಗಾಗಿ ಅನೇಕ ಹೋರಾಟಗಾರರ ಬಗ್ಗೆ ವಾಸ್ತವಾಂಶವನ್ನು ತಿಳಿಸುವ ನಿಟ್ಟಿನಲ್ಲಿ ಚರಿತ್ರೆಯನ್ನು ಮರು ರಚಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಳೆದು ಹೋದ ಚರಿತ್ರೆಯ ಕಾಲವನ್ನು ಕಟ್ಟಿಕೊಡುವಲ್ಲಿ ಈ ಚಿತ್ರಸಂಪುಟ ಯಶಸ್ವಿಯಾಗಿದೆ. ರಾಣಿ ಚೆನ್ನಮ್ಮ ಸೇರಿದಂತೆ ಹಲವು ನಾಯಕರ ಹೋರಾಟ ಅನನ್ಯವಾದುದು. ಜನರಲ್ಲಿ ದೇಶಪ್ರೆಮದ ಕಿಡಿ ಹೊತ್ತಿಸುವುದು ಮತ್ತು ಬ್ರಿಟಿಷರ ವಿರುದ್ಧ ತೊಡೆ ತಟ್ಟುವಂತೆ ಪ್ರೇರಣೆ ನೀಡುವುದು ಅವರ ಹೋರಾಟದ ಆಶಯವಾಗಿತ್ತು ಎಂದರು.
ಇಂತಹ ಹೋರಾಟವನ್ನು ತಿಳಿಸುವ ನಿಟ್ಟಿನಲ್ಲಿ ಅಕ್ಷರ ರೂಪದಲ್ಲಿರುವ ಚರಿತ್ರೆಗಳೇ ಜಾಸ್ತಿ ಬಂದಿವೆ. ಆದರೆ ಮೀರಸೌದಾಮಿನಿ ಕೃತಿಯಲ್ಲಿ ಚರಿತ್ರೆಯೊಂದಿಗೆ, ಪರಿಚಯಾತ್ಮಕ ಲೇಖನಗಳಿವೆ. ಆಕರ್ಷಕ ಚಿತ್ರಗಳಲ್ಲೂ ಕಟ್ಟಿಕೊಡಲಾಗಿದೆ. ಡ್ರೊನ್ ಕ್ಯಾಮರಾದಿಂದ ಚಿತ್ರಗಳನ್ನು ತೆಗೆದು ಬಳಸಿರುವುದು ಸೊಗಸಾಗಿದೆ ಎಂದು ಬಣ್ಣಿಸಿದರು.
ಅಧಿಕಾರಶಾಹಿಯ ಲೇಖಕರಿಗೆ, ಸಂಶೋಧಕರಿಗೆ ತೊಂದರೆ ಕೊಡುವ ಮನೋಭಾವ ಬಿಡಬೇಕು. ಅದು ಸಾಹಿತ್ಯದ ಬೆಳವಣಿಗೆ ಸಹಕಾರಿ ಆಗುತ್ತದೆ. ಟಿಪ್ಪು ಸುಲ್ತಾನ್, ಸುರಪುರದ ವೆಂಕಟಪ್ಪ ನಾಯಕ ಹಾಗೂ ರಾಣಿ ಚೆನ್ನಮ ಸೇರಿದಂತೆ ಅನೇಕರ ಹೋರಾಟ ಅನನ್ಯವಾದುದು. ಆದರೆ ಚರಿತ್ರೆಕಾರರು, ಟಿಪ್ಪು ಸುಲ್ತಾನ್ ಎನ್ನುತ್ತಿದ್ದಂತೆಯೇ ಧಾರ್ಮಿಕ ಕಣ್ಣುಪಟ್ಟಿ ಕಟ್ಟಿಕೊಂಡು ನೋಡಿ ನಿಜ ಹೋರಾಟಗಾರರನಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆದರೆ ನಮ್ಮ ಜನಪದರು ಟಿಪ್ಪು ಬಗ್ಗೆ ಸತ್ಯನಿಷ್ಟವಾಗಿ ಪತ್ರಿಕ್ರಿಯಿಸಿದ್ದಾರೆ. ಅವರು ಕಟ್ಟಿರುವ ಲಾವಣಿಗಳು ಟಿಪ್ಪು ಎಂತಹ ಹೋರಾಟಗಾರ-ಪರಾಕ್ರಾಮಿ, ದೇಶಪ್ರೆಮಿ ಎಂಬುದನ್ನು ತಿಳಿಸಿವೆ. ಸಮೂಹ ಪ್ರಜ್ಞೆಯು ವಸ್ತು ನಿಷ್ಠ ಹಾಗೂ ಸತ್ಯನಿಷ್ಠವಾಗಿರುತ್ತದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ರಾಜಗುರು ಕಲಠದ ಮಡಿವಾಳ ಶ್ರೀರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಿಕಟ ಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಾಹಿತಿ ಎಂ.ಎಸ್.ಶಶಿಕಲಾಗೌಡ, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಮ.ನ.ಲತಾ ಮೋಹನ್, ಗೌರವ ಕೋಶಾಧ್ಯಕ್ಷ ಜಿ.ಪ್ರಕಾಶ್, ಜಂಟಿ ಕಾರ್ಯದರ್ಶಿ ಕೆ.ಕೆಂಪಣ್ಣ, ಸಂಚಾಲಕ ಮ.ನ.ಲೋಕೇಶ್ ಇತರರು ಇದ್ದರು. ಕಾರ್ಯಕ್ರಮದಲ್ಲಿ ಚಿತ್ರಸಂಪುಟದ ಲೇಖಕ ಸಂತೋಷ ಹಾನಗಲ್ಲ ಅವರನ್ನು ಸನ್ಮಾನಿಸಲಾಯಿತು.