ಜಿಲ್ಲೆ

ಐತಿಹಾಸಿಕ ನೆಲೆವೀಡು ಹೊಂಗನೂರು

ಗಂಗಾಧರ ಬಿ ವಿ

* ರಾಜಮನೆತನಗಳು ಆಳ್ವಿಕೆ ನಡೆಸಿರುವ ಗ್ರಾಮ

* ನಿಟ್ಟೂರಿನ ಶಾಸನ ಐತಿಹಾಸಿಕ ಹಿನ್ನೆಲೆಗೆ ಸಾ

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಪ್ರಾಚಿನ ಕಾಲದಲ್ಲಿ  ಜ್ಞಾನಮಂಟಪ ಕ್ಷೇತ್ರ ಎಂದು ಕರೆಯಲ್ಪಡುತ್ತಿದ್ದ ಚನ್ನಪಟ್ಟಣ ತಾಲೂಕಿನ ಹಲವು ಗ್ರಾಮಗಳು ಐತಿಹಾಸಿಕ ಹಿನ್ನೆಲೆ ಹೊಂದಿವೆ. ಅಂತಹ ಗ್ರಾಮಗಳಲ್ಲಿ ತಾಲೂಕಿನ ಹೊಂಗನೂರು ಒಂದು.

ತಾಲೂಕಿನ ದೊಡ್ಡಗ್ರಾಮಗಳ ಸಾಲಿನಲ್ಲಿರುವ ಈ ಗ್ರಾಮದ ಇತಿಹಾಸವೂ ಬಹಳ ದೊಡ್ಡದಾಗಿದೆ. ಈ ಗ್ರಾಮ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಹೊಯ್ಸಳರು, ಗಂಗರು, ವಿಜಯನಗರದರಸರು ಸೇರಿ ಹಲವು ರಾಜಮನೆತನಗಳು ಈ ನೆಲದಲ್ಲಿ ಆಳ್ವಿಕೆ ನಡೆಸಿರುವ ಇತಿಹಾಸವಿದೆ. ಐತಿಹಾಸಿಕ ಮಹತ್ವದ ಸ್ಥಳವಾಗಿರುವ ಈ ಗ್ರಾಮಕ್ಕೆ ಹಿಂದೆ ಪುಂಗನೂರು, ಹುಂಗನೂರು ಹಾಗೂ ತಮಲಾಪುರಿ ಎಂಬ ಹೆಸರಿದ್ದು, ಕಾಲಕ್ರಮೇಣ ಅದು ಹೊಂಗನೂರು ಆಗಿ ಬದಲಾಗಿದೆ.

ಸರ್ವಜನಾಂಗದ ಶಾಂತಿಯ ತೋಟ!

ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಹೊಂಗನೂರು, ಚನ್ನಪಟ್ಟಣ ತಾಲೂಕಿನ ದೊಡ್ಡಗ್ರಾಮಗಳಲ್ಲೊಂದಾಗಿದೆ. ಈ ಗ್ರಾಮದಲ್ಲಿ ಸರ್ವ ಜನಾಂಗಗಳು ಇರುವುದು ವಿಶೇಷ. ಅರಸು ಜನಾಂಗ ಬಹುಸಂಖ್ಯೆಯಲ್ಲಿದ್ದು, ತದನಂತರದ ಸ್ಥಾನದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಒಕ್ಕಲಿಗರು ಇದ್ದಾರೆ. ಆದಿವಾಸಿ ಜನಾಂಗವೂ ಗ್ರಾಮದಲ್ಲಿರುವುದು ವಿಶೇಷ. ವಾಣಿಜ್ಯಕೇಂದ್ರವಾಗಿರುವ ಈ ಗ್ರಾಮದಲ್ಲಿ ಸರ್ವಜನಾಂಗಗಳು ಸಹಬಾಳ್ವೆಯ ಜೀವನ ಸಾಗಿಸುತ್ತಿವೆ.

ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿಪೂರ್ವ ಕಾಲೇಜಿನವರೆಗೂ ಶೈಣಿಕ ಸೌಲಭ್ಯವಿದ್ದು, ಗ್ರಾಮದ ಡಾ.ವೆಂಕಟಪ್ಪ ಎಂಬುವವರು ಕೋಟ್ಯಂತರ ರೂ. ವ್ಯಯಿಸಿ ಭವ್ಯ ಶಾಲಾ&ಕಾಲೇಜು ಕಟ್ಟಡ ನಿರ್ಮಿಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದೆ. ಗ್ರಾಪಂ, ತಾಪಂ ಹಾಗೂ ಜಿಪಂನ ಕೇಂದ್ರ ಸ್ಥಾನ ಈ ಗ್ರಾಮವಾಗಿದೆ.

ಹೊಯ್ಸಳರ ಕಾಲದ ಆಡಳಿತ ಕೇಂದ್ರ

ಹೊಂಗನೂರು ಐತಿಹಾಸಿಕ ನೆಲೆವೀಡು ಎಂದರೆ ತಪ್ಪಾಗಲಾರದು. ಹೊಯ್ಸಳರ ಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರ ಹಾಗೂ ವಾಣಿಜ್ಯ ಕೇಂದ್ರವಾಗಿದ್ದ ಈ ಗ್ರಾಮ ಮೂರನೇ ವೀರ ಬಳ್ಳಾಲನ ಕಾಲದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿತ್ತು. ಈ ಗ್ರಾಮವನ್ನು ರಾಜರಾಜ ಚೋಳನ ಮಗಳಾದ ಕುಂದವೈ ಹೆಸರಿನಲ್ಲಿಯೂ ಕರೆಯಲಾಗಿತ್ತು ಎನ್ನುವ ಮಾಹಿತಿಯಿದೆ. ಗ್ರಾಮದಲ್ಲಿರುವ ಪುರಾತನ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನು ರಾಜ ರಾಜ ಚೋಳನ ಮಗಳು ನಿರ್ಮಿಸಿದ್ದು, ಇದನ್ನು ಕೊಂದವೈ ವಿನಗರಂ ಎಂದು ಕರೆಯುತ್ತಾರೆ. ಚೋಳರ ಕಾಲದಲ್ಲಿ ಅಗ್ರಹಾರವಾಗಿದ್ದ ಈ ಗ್ರಾಮವನ್ನು ತ್ರಿಲೋಕ್ಯಮಾದೇವಿ-ಚತುರ್ವೇದಿ&ಮಂಗಳಂ ಎಂತಲೂ ಕರೆಯುತ್ತಿದ್ದ ಉಲ್ಲೆಖವಿದೆ. ಇನ್ನೂ ಗಂಗರ ಕಾಲದಲ್ಲಿ ಇದು "ಚಿಕ್ಕ ಗಂಗವಾಡಿ' ಪ್ರಾಂತದ ಕೇಂದ್ರಸ್ಥಾನವೂ ಆಗಿದ್ದು, ಮಳವಳ್ಳಿ ತಾಲೂಕಿನಲ್ಲಿ ದೊರೆತ ನಿಟ್ಟೂರಿನ ಶಾಸನ ಈ ಗ್ರಾಮದ ಐತಿಹಾಸಿಕ ಹಿನ್ನೆಲೆಗೆ ಸಾಯಾಗಿದೆ.

ಪುರಾತನ ದೇವಾಲಯಗಳು

ಗ್ರಾಮದಲ್ಲಿರುವ ಹಲವು ಪುರಾತನ ದೇವಾಲಯಗಳು ಗ್ರಾಮದ ಗತ ಇತಿಹಾಸಕ್ಕೆ ಸಾಯಾಗಿವೆ ಎನ್ನಬಹುದು. ಗ್ರಾಮದಲ್ಲಿ ಹೊಯ್ಸಳರ ಕಾಲದ ಕೋಡಿಭೈರವನ ವಿಗ್ರಹವಿದೆ. ಇನ್ನೂ ಅತ್ಯಂತ ಪುರಾತನವಾದ ಗೋಪಾಲಕೃಷ್ಣ ದೇವಸ್ಥಾನವು ಹೊಯ್ಸಳ ಮತ್ತು ವಿಜಯ ನಗರ ಅರಸರ ಕಾಲದಲ್ಲಿ ಜೀಣೋರ್ದ್ಧಾರ ಆಗಿವೆ ಎನ್ನಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ಚೋಳರ ಕಾಲದ ಲ್ಮ ದೇವಾಲಯವಿದ್ದು, 6 ಕಂಬಗಳ ಮಂಟಪವಿದೆ. ಇದರೊಂದಿಗೆ ಶ್ರೀ ಹೊನ್ನಾಳೇಶ್ವರ ದೇವಾಲಯವು ಚೋಳರಸರ ಮತ್ತೊಂದು ಕೊಡುಗೆ ಎನ್ನಬಹುದು. ಗ್ರಾಮದಲ್ಲಿರುವ ವೀರಗಲ್ಲು, ಮಾಸ್ತಿಗಲ್ಲು ಗ್ರಾಮದ ಐತಿಹ್ಯವನ್ನು ಸಾರಿ ಹೇಳುತ್ತವೆ. ಹಲವು ಶಾಸನಗಳಲ್ಲಿ ಗ್ರಾಮದ ಐತಿಹಾಸಿಕ ಮಾಹಿತಿಗಳ ಉಲ್ಲೆಖವಿದೆ. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮದಲ್ಲಿ ಜನಿಸಿರುವುದೇ ನಮ್ಮ ಪುಣ್ಯ ಎನ್ನುತ್ತಾರೆ ಗ್ರಾಮದ ಡಾ.ವೆಂಕಟಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬೋರ್​ವೆಲ್​ ರಂಗನಾಥ್​, ಗ್ರಾಪಂ ಮಾಜಿ ಅಧ್ಯ ಅನಂತಕೃಷ್ಣರಾಜೇಅರಸ್​, ವಕೀಲ ಮುಕ್ರಂ, ನಿವೃತ್ತ ಶಿಕ ವಸಂತಕುಮಾರ್​, ತಾಪಂ ಮಾಜಿ ಸದಸ್ಯ ಸುರೇಶ್​, ಮುಖಂಡರಾದ ಮಂಚೇಗೌಡ ಹಾಗೂ ತೀರ್ಥಪ್ರಸಾದ್​.

ನಾಲ್ಕು ದಿಕ್ಕು ಕಾಯುವ ಮಾರಮ್ಮ

ಈ ಗ್ರಾಮ ಧಾರ್ಮಿಕವಾಗಿಯೂ ಹೆಸರುವಾಸಿಯಾಗಿದೆ. ಗ್ರಾಮದಲ್ಲಿರುವ ಲಕ್ಷ್ಮೀ ದೇವಮ್ಮ (ಅಟ್ಟಿಲಕ್ಕಮ್ಮ, ಲಕ್ಕಮ್ಮ) ಕುರುಬ ಸಮುದಾಯದ ಆರಾಧ್ಯ ದೇವತೆಯಾಗಿದೆ. ಇನ್ನೂ ಗ್ರಾಮ ಸೇರಿ ಸುತ್ತಮುತ್ತಲ್ಲ ಏಳು ಊರಿನ ಗ್ರಾಮದೇವತೆಯಾಗಿರುವ ನಾಲ್ಕುಮಂಡೆ ಮಾರಮ್ಮ ಬಹಳ ಶಕ್ತಿಶಾಲಿ ದೇವತೆ ಎಂದು ನಂಬಲಾಗಿದೆ. ಈ ದೇವತೆ ನಾಲ್ಕು ತಲೆ ಹೊಂದಿದ್ದು, ನಾಲ್ಕು ದಿಕ್ಕನ್ನು ಕಾಯುತ್ತಾಳೆ ಹಾಗೂ ತನ್ನ ಮೊರೆ ಹೋದವರನ್ನು ಕಾಯುತ್ತಾಳೆ ಎಂಬ ನಂಬಿಕೆ ಇದೆ. ಚೋಳರ ಕಾಲದ ಹೊನ್ನಾಳೇಶ್ಚರ ದೇವಸ್ಥಾನ ಸಹ ಗ್ರಾಮದ ಪ್ರಮುಖ ದೇವಾಲಯವಾಗಿದೆ. ಗ್ರಾಮದ ಸಮೀಪದ ಒಡೆಯರ್​ ಕೆಂಪಮ್ಮ ಸಹ ಗ್ರಾಮದ ಜನರ ಆರಾಧ್ಯ ದೇವತೆಯಾಗಿದ್ದಾರೆ. ಗ್ರಾಮದಲ್ಲಿ ಹಲವಾರು ದೇವಾಲಯಗಳಿದ್ದು, ಹಬ್ಬಹರಿದಿನಗಳನ್ನು ಎಲ್ಲರೂ ಒಗ್ಗೂಡಿ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನಾ ಮಸೀದಿಯೂ ಇದೆ.

ಖಡ್ಗ ರಪ್ತು

ಮೈಸೂರು ದರ್ಬಾರ್​ನಲ್ಲಿ ಈ ಹಿಂದಿನಿಂದಲೂ ಗ್ರಾಮದ ಅರಸು ಬಂಧುಗಳು ಭಾಗವಹಿಸುತ್ತಿದ್ದಾರೆ. ಗ್ರಾಮದ ಅರಸು ಸಮುದಾಯದವರ ಪ್ರತಿಮನೆಯಲ್ಲೂ ವಿಜಯನಗರದ ಕಾಲದಲ್ಲಿ ಬಳಸುತ್ತಿದ್ದ ಖಡ್ಗಗಳು ಇರುವುದು ಮತ್ತೊಂದು ವಿಶೇಷ. ಗ್ರಾಮದಲ್ಲಿ ಈ ಹಿಂದೆ ಖಡ್ಗ ತಯಾರು ಮಾಡಿ ಹೊರಗಡೆ ರಪ್ತು ಮಾಡುತ್ತಿದರಂತೆ, ಆ ಬೀದಿಯನ್ನು ಈಗಲೂ ಬಂಡಿ ಸಾರಿಗೆ ಎಂದೇ ಕರೆಯುತ್ತಾರೆ. ಒಟ್ಟಾರೆ, ಹೊಂಗನೂರು ಗ್ರಾಮವನ್ನು ಇತಿಹಾಸದಲ್ಲಿ ಹೆಬ್ಬುಲಿ ಎಂದರೆ ತಪ್ಪಾಗಲಾರದು.