ಜಿಲ್ಲೆ

ಅಬ್ಬಿಗೇರಿಯಲ್ಲಿ ರಂಭಾಪುರಿ ಶ್ರೀಗಳ ಐತಿಹಾಸಿಕ ದಸರಾ ಮಹೋತ್ಸವ

ಬಾಳೆಹೊನ್ನೂರು: ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಅ.3ರಿಂದ 12ರವರೆಗೆ ನಡೆಯುವ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವ ಐತಿಹಾಸಿಕವಾಗಿರಲಿದೆ ಎಂದು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅಬ್ಬಿಗೇರಿಯಲ್ಲಿ ಗುರುವಾರದಿಂದ ನಡೆಯುವ 33ನೇ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ತೆರಳುವ ಮುನ್ನ ಮಂಗಳವಾರ ರಂಭಾಪುರಿ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹಲವು ವರ್ಷಗಳ ಆಶಯದಂತೆ ಅಬ್ಬಿಗೇರಿಯಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಆಯೋಜಿಸಲಾಗಿದೆ.
ಧರ್ಮ ಸಮ್ಮೇಳನಕ್ಕೆ ರೋಣ ಶಾಸಕ ಜಿ.ಎಸ್.ಪಾಟೀಲ, ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಎಲ್ಲ ಧರ್ಮಗಳು ಶ್ರಮಿಸುತ್ತಿದ್ದು, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಧ್ಯೇಯ ಹೊಂದಿ ಸಾತ್ವಿಕ ಸಮಾಜ ಕಟ್ಟಿ ಬೆಳೆಸಲು ರಂಭಾಪುರಿ ಪೀಠ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇಂದು ಎಲ್ಲೆಡೆ ಶಾಂತಿ, ಸಾಮರಸ್ಯ, ಸದ್ಭಾವನೆಗಳು ಬೆಳೆಯಬೇಕಿದೆ. ಭಾರತೀಯ ಉತ್ಕೃಷ್ಟ ಸಂಸ್ಕೃತಿ, ಆದರ್ಶಗಳನ್ನು ಮನವರಿಕೆ ಮಾಡುವ ಅಗತ್ಯವಿದೆ. ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಕ್ರಮಗಳನ್ನು ಮಾಡಬೇಕಿದೆ. ಅಬ್ಬಿಗೇರಿಯಲ್ಲಿ ನಡೆಯುವ ದಸರಾ ನಾಡಹಬ್ಬದಲ್ಲಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಎಲ್ಲ ಸಮುದಾಯದ ಜನರು ಪಾಲ್ಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಬೆಳಗ್ಗೆ ಶ್ರೀಪೀಠದ ಎಲ್ಲ ದೈವ ಮಂದಿರದಲ್ಲಿ ಜಗದ್ಗುರುಗಳು ವಿಶೇಷ ಅಷ್ಟೋತ್ತರ, ಮಹಾ ಮಂಗಳಾರತಿ ಪೂಜೆ ನೆರವೇರಿಸಿದರು. ಶಾಸಕ ಟಿ.ಡಿ.ರಾಜೇಗೌಡ ರಂಭಾಪುರಿ ಜಗದ್ಗುರುಗಳಿಗೆ ಗೌರವಾರ್ಪಣೆ ಮಾಡಿ ಮಾತನಾಡಿ, ಅಬ್ಬಿಗೇರಿಯಲ್ಲಿ ರಂಭಾಪುರಿ ಪೀಠದ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿ ಗುರುಗಳನ್ನು ಸಂಭ್ರಮದಿಂದ ಬೀಳ್ಕೊಡಲಾಗುತ್ತಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಸದಸ್ಯರಾದ ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಫಿಲೋಮಿನಾ ತಾವ್ರೊ, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷ ಭಟ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀನ್ ಮತ್ತಿತರರು ಇದ್ದರು.