ಹಿರಿಯೂರು: ನಗರದ ನೆಹರು ಮೈದಾನದಲ್ಲಿ ಆರಂಭಿಸಿದ್ದ ತರಕಾರಿ, ಹಣ್ಣು ಮಾರುಕಟ್ಟೆಯನ್ನು ಮಾ.31ರಿಂದ ಬಂದ್ ಮಾಡಿದ್ದು, ಗ್ರಾಹಕರಿಗೆ ಸಂಚಾರಿ ವಾಹನಗಳ ಮೂಲಕ ಏ.1ರಿಂದ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ತಹಸೀಲ್ದಾರ್ ಸತ್ಯನಾರಾಯಣ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಂದಾಯ, ಪೊಲೀಸ್, ನಗರಸಭೆ ಸಿಬ್ಬಂದಿ, ತರಕಾರಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು.
ನೆಹರು ಮಾರುಕಟ್ಟೆಯಲ್ಲಿ ಜಾಗ ಕಿರಿದಾಗಿದೆ. ಒಮ್ಮೆಲೆ ನೂರಾರು ನಾಗರಿಕರು ತರಕಾರಿ ಖರೀದಿಗೆ ಬಂದರೆ ಕರೊನಾ ಹರಡುವ ಸಾಧ್ಯತೆ ಇರುತ್ತದೆ.
ಈ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಮಾರಾಟ ಸ್ಥಗಿತಗೊಳಿಸಿ, ಮನೆ ಮುಂದೆ ವಾಹನ, ತಳ್ಳು ಗಾಡಿಗಳಲ್ಲಿ ತರಕಾರಿ ಸಿಗುವ ವ್ಯವಸ್ಥೆ ಮಾಡಲಾಗುವುದು. ಒಟ್ಟೊಟ್ಟಿಗೆ ಐದಾರು ಜನ ಸೇರದಂತೆ ತರಕಾರಿ ವ್ಯಾಪಾರಿಗಳು ನೋಡಿಕೊಳ್ಳುವಂತೆ ಸೂಚಿಸಿದರು.
ಸಿಪಿಐ ರಾಘವೇಂದ್ರ ಮಾತನಾಡಿ, ತರಕಾರಿ ಮಾರಾಟಕ್ಕೆ ಅನುಮತಿ ಸಿಕ್ಕಿದೆ ಎಂದು ಬೇಕಾಬಿಟ್ಟಿ ದರ ನಿಗದಿ ಮಾಡುವಂತಿಲ್ಲ. ಹಾಪ್‌ಕಾಮ್ಸ್‌ನಿಂದ ಪ್ರತಿದಿನ ದರಪಟ್ಟಿ ತರಿಸಲಾಗುವುದು. ಅದಕ್ಕಿಂತ ಕಡಿಮೆ ಬೆಲೆ ನಿಗದಿಪಡಿಸಿದರೆ ನಮ್ಮ ಆಕ್ಷೇಪಣೆ ಇಲ್ಲ ಎಂದು ತಿಳಿಸಿದರು.
ಅಸಮಾಧಾನ: ಸಿಬ್ಬಂದಿ ಕೊರತೆ ನಡುವೆಯೂ ನಗರದಲ್ಲಿ ಸ್ವಚ್ಛತೆ ನಿರ್ವಹಣೆಗೆ ಸತತ ಪ್ರಯತ್ನ ನಡೆಸುತ್ತಿದ್ದು, ಕೆಲವೊಮ್ಮೆ ಕಸದ ವಾಹನ ಒಂದು ದಿನ ಬರದಿದ್ದರೂ ಬೀದಿಗೆ ಬಿಸಾಡುವ ಹವ್ಯಾಸವನ್ನು ಸಾರ್ವಜನಿಕರು ಬಿಡಬೇಕು.
ನೆಹರು ಮೈದಾನದಲ್ಲಿ ವರ್ತಕರು, ಗ್ರಾಹಕರಿಗೆ ಪ್ರತ್ಯೇಕ ಮಾರ್ಕಿಂಗ್ ಮಾಡಿದ್ದರೂ ನಿಯಮ ಪಾಲಿಸುತ್ತಿಲ್ಲ. ಹೀಗಾದರೆ ಕರೊನಾ ನಿಯಂತ್ರಣ ಸಾಧ್ಯವೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪೌರಾಯುಕ್ತ ಶಿವಪ್ರಸಾದ್ ಬೇಸರ ವ್ಯಕ್ತಪಡಿಸಿದರು.