ಜಿಲ್ಲೆ

ನಿಮ್ಮ ಭವಿಷ್ಯದ ಶಿಲ್ಪಿಗಳು ನಿವೇ

ಹಿರಿಯೂರು: ಶ್ರದ್ಧೆ, ಪರಿಶ್ರಮದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಸುರೇಶ್ ಬಾಬು ತಿಳಿಸಿದರು.

ತಾಲೂಕಿನ ಆರನಕಟ್ಟೆ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಹೆತ್ತವರ ತ್ಯಾಗ ಅರಿತು ಶೈಕ್ಷಣಿಕ ಚಟುವಟಿಕೆಗಳ ಜತೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಸಾಧನೆ ಕಟ್ಟಿಟ್ಟ ಬುತ್ತಿ. ಕೈಗೊಳ್ಳುವ ಪ್ರತಿ ಚಟುವಟಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು ಎಂದು ಸಲಹೆ ನೀಡಿದರು.

ಕೆಎಸ್‌ಎಸ್ ಅಧಿಕಾರಿಯಾಗಿ ನೇಮಕವಾದ ವಿನೋದಮ್ಮ ಮಾತನಾಡಿ, ನನ್ನ ಪಾಲಕರು ತರಕಾರಿ ಮಾರಿ ನನ್ನ ಜೀವನ ರೂಪಿಸಲು ಹಗಲಿರುಳು ಶ್ರಮಿಸಿದ್ದಾರೆ. ಅವರ ಕನಸು ನನಸಾಗಿಸಿದ ಖುಷಿ ನನ್ನಲ್ಲಿದೆ. ವಿದ್ಯಾರ್ಥಿಗಳಿಗೆ ಸಾಧಿಸುವ ಛಲವಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಜಿಪಂ ಸದಸ್ಯೆ ಗೀತಾ, ಗ್ರಾಪಂ ಅಧ್ಯಕ್ಷೆ ಪುಷ್ಪಲತಾ, ಪ್ರಾಚಾರ್ಯ ಕೆಂಚಪ್ಪ, ರೈತ ಮುಖಂಡ ಶಿವಕುಮಾರ್, ಉಪನ್ಯಾಸಕ ಚಂದ್ರಯ್ಯ, ಕಂದಿಕೆರೆ ಸುರೇಶ್ ಬಾಬು ಇತರರಿದ್ದರು.