ಜಿಲ್ಲೆ

ಕುಂಬಾರರು ಶ್ರಮ ಸಂಸ್ಕೃತಿಯ ಪ್ರತೀಕ

ಹಿರಿಯೂರು: ಶ್ರಮ ಸಂಸ್ಕೃತಿ ಪ್ರತೀಕವಾದ ಕುಂಬಾರ ಸಮಾಜ ಸಂಘಟಿತವಾಗುವ ಮೂಲಕ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಕೇಶವಮೂರ್ತಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಕುಂಬಾರ ಕಲಾಭಿವೃದ್ಧಿ ಮಂಡಳಿ ಸ್ಥಾಪಿಸಿರುವುದು ಸ್ವಾಗತಾರ್ಹ. ಇದನ್ನು ದೇವರಾಜು ಅರಸು ನಿಗಮದಿಂದ ಪ್ರತ್ಯೇಕಿಸಿ, ಕುಂಬಾರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಸಮಾಜದ ಮುಖಂಡ ಮಹೇಶ್ವರಪ್ಪ ಮಾತನಾಡಿ, ಕುಂಬಾರ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸಂಘಟಿತವಾಗಿ ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ. ಸರ್ವಜ್ಞ ಅವರ ಕ್ರಾಂತಿಕಾರಕ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಸತ್ಯನಾರಾಯಣ ಮಾತನಾಡಿ, ಅಧಿಕಾರಿಗಳು ತಮ್ಮ ಹೊಣೆ ಅರಿತು ಕರ್ತವ್ಯ ನಿರ್ವಹಿಸಿದರೆ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬಹುದು ಎಂದರು.

ಡಾ.ಡಿ.ಧರಣೇಂದ್ರಯ್ಯ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಸದಸ್ಯ ಓಂಕಾರಪ್ಪ, ನಗರಸಭೆ ಸದಸ್ಯ ದಾದಾಪೀರ್, ಬಿಸಿಎಂ ಅಧಿಕಾರಿ ಮಧುರೆ, ಮುಖಂಡರಾದ ಸಣ್ಣಭೀಮಣ್ಣ, ಸಿದ್ದೇಶ್, ಕಲ್ಪನಾ, ತಿಮ್ಮರಾಜ್, ವರದರಾಜು, ತಿಪ್ಪೇಸ್ವಾಮಿ, ಶಾಂತರಾಜು, ರಮೇಶ್, ಶಿವಣ್ಣ ಇತರರಿದ್ದರು.