ಜಿಲ್ಲೆ

ಕೃಷಿ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಕೊಕ್ಕೆ

Chitradurga

ಹಿರಿಯೂರು: ಲಾಕ್‌ಡೌನ್ ಮತ್ತು ಪೊಲೀಸರ ಲಾಠಿ ಏಟಿನ ಭಯಕ್ಕೆ ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ಹೊಡೆತ ಬಿದ್ದಿದೆ.

ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಮುಕ್ತ ಸಾಗಣೆ-ಮಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳುತ್ತಿದ್ದರೂ ಪೊಲೀಸರ ಲಾಠಿ ಏಟಿನ ಭಯದಿಂದ ಕೃಷಿ ಉತ್ಪನ್ನ ಕೊಳ್ಳಲು ಖರೀದಿದಾರರು ಬರುತ್ತಿಲ್ಲ.

ಮಾರಾಟಕ್ಕೆ ಅವಕಾಶ ಸಿಗದೆ ಹಣ್ಣು, ತರಕಾರಿ, ಹೂವು ಬೆಳೆಯನ್ನು ಹೊಲದಲ್ಲಿಯೇ ನಾಶಪಡಿಸಲಾಗುತ್ತಿದೆ. ಇಷ್ಟೆಲ್ಲ ಆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಭೆಯಲ್ಲೇ ಕಾಲದೂಡುತ್ತಿದ್ದಾರೆಯೇ ವಿನಃ ನಮ್ಮ ನೆರವಿಗೆ ಧಾವಿಸುತ್ತಿಲ್ಲ ಎಂಬ ಬಗ್ಗೆ ವಿಜಯವಾಣಿ ಲೌಡ್‌ಸ್ಪೀಕರ್‌ನಲ್ಲಿ ರೈತರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಧರ್ಮಪುರ ರೈತ ಹಾರ್ಡ್‌ವೇರ್ ಶಿವಣ್ಣ ಹೇಳಿಕೆ: ಐದಾರು ವರ್ಷದಿಂದ ಮಳೆ ಕೊರತೆ, ಬೆಳೆ ನಾಶದಿಂದ ಹೈರಾಣಾಗಿದ್ದ ರೈತರಿಗೆ ಲಾಕ್‌ಡೌನ್ ಮತ್ತೆ ಸಂಕಷ್ಟಕ್ಕೆ ದೂಡಿದೆ. ಬೀಜ, ಗೊಬ್ಬರ ಖರೀದಿಸಲು ಸಾಧ್ಯವಾಗದೆ ತರಕಾರಿ ಬೆಳೆ ನಾಟಿ ಮಾಡಿಲ್ಲ. ಮುಂಬರುವ ದಿನದಲ್ಲಿ ಆಹಾರದ ಅಭಾವ ಎದುರಾಗಲಿದೆ.

ತಾಪಂ ಸದಸ್ಯ ಯಶವಂತ್‌ರಾಜ್ ಹೇಳಿಕೆ: ಬೆಳೆಗೆ ಬೆಲೆ ನಿಗದಿ ಮಾಡಿ ಎಪಿಎಂಸಿ ಮಾರುಕಟ್ಟೆ ಮೂಲಕ ಸರ್ಕಾರವೇ ಖರೀದಿಸಿ ರೈತರ ಹಿತ ಕಾಪಾಡಬೇಕು. ಈ ಸಂಕಷ್ಟದಿಂದ ಅನ್ನದಾತರನ್ನು ಪುನರ್ ಚೈತನ್ಯಗೊಳಿಸಲು ಯೋಜನೆ ರೂಪಿಸಬೇಕು.

ವಿ.ಕೆ.ಗುಡ್ಡದ ಪ್ರಗತಿಪರ ರೈತ ಹನುಮಂತರಾಯಪ್ಪ ಹೇಳಿಕೆ: ಗ್ರಾಮೀಣ ಭಾಗದಿಂದ ಜಿಲ್ಲಾಮಟ್ಟದ ಹಾಪ್‌ಕಾಮ್ಸ್‌ಗೆ ಹಣ್ಣು-ತರಕಾರಿ ತೆಗೆದುಕೊಂಡು ಹೋಗುವುದು ಕಷ್ಟ-ಸಾಧ್ಯ. ಕೃಷಿ-ತೋಟಗಾರಿಕೆ ಇಲಾಖೆ ಮುಖಾಂತರ ಹೋಬಳಿ ಮಟ್ಟದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದೆ.

ಹಲಗಲದ್ದಿ ಯುವ ರೈತ ಮಲ್ಲೇಶ್ ಹೇಳಿಕೆ: ಎರಡು ಎಕರೆಯಲ್ಲಿ ಸಾವಿರಾರು ರೂ. ಖರ್ಚು ಮಾಡಿ ಹೂವು ಬೆಳೆಯಲಾಗಿದೆ. ಕಟಾವಿಗೆ ಬಂದಿರುವ ಸಮಯದಲ್ಲಿ ಲಾಕ್‌ಡೌನ್ ಆಗಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ನೆರವಿಗೆ ಧಾವಿಸಬೇಕು.