ಹಿರಿಯೂರು: ಕೇರಳದ ಮಣಪುರಂ ಜಿಲ್ಲೆಯ ಕ್ಯಾಲಿಕಟ್ ಸಮೀಪ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಕಾರು-ಲಾರಿ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ.
ನಗರ ಸಭೆ ಸದಸ್ಯ ಎ.ಪಾಂಡುರಂಗ (34), ಗುಳಗೊಂಡನಹಳ್ಳಿ ಗ್ರಾಮದ ಪ್ರಭಾಕರ್ (50) ಮೃತ ದುರ್ದೈವಿಗಳು. ಅವಿನಾಶ್, ರಂಗನಾಥ್, ಸದ್ದಾಂ, ರಂಗಸ್ವಾಮಿ, ಸೈಯದ್ ಸಲಾವುದ್ದಿನ್, ಕರುಣಕುಮಾರ್ ಗಾಯಗೊಂಡಿದ್ದು, ಕೇರಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಹಿರಿಯೂರಿನಿಂದ ಸೋಮವಾರ ಕೇರಳ ಪ್ರವಾಸಕ್ಕೆ 8 ಜನರು ಕಾರಿನಲ್ಲಿ ತೆರಳಿದ್ದರು. ಮಂಗಳವಾರ ರಾತ್ರಿ ಮಣಪುರಂ ಜಿಲ್ಲೆಯಲ್ಲಿ ಊಟ ಮುಗಿಸಿ ಕ್ಯಾಲಿಕಟ್ ಕಡೆಗೆ ತೆರಳುವ ಮಾರ್ಗದಲ್ಲಿ ಅವಘಡ ಸಂಭವಿಸಿದೆ.
ಅವಿರೋಧ ಆಯ್ಕೆ: ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಹಿರಿಯೂರಿನ 7ನೇ ವಾರ್ಡ್‌ನಲ್ಲಿ ಎ.ಪಾಂಡುರಂಗ ಅವಿರೋಧವಾಗಿ ಆಯ್ಕೆಯಾಗಿದ್ದು, ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು.