ಹಿರಿಯೂರು: ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗುರುವಾರ ಆಯೋಜಿಸಿದ್ದ ಆಹಾರೋತ್ಸವದಲ್ಲಿ ರಾಗಿ ಬಸ್ಸಾರು ರುಚಿ ಆಹಾರಪ್ರಿಯರ ಮನಗೆದ್ದಿತು. ಲಾಭವಾಗಿ ಬಂದ ಹಣವನ್ನು ವೃದ್ಧಾಶ್ರಮಕ್ಕೆ ದೇಣಿಗೆ ನೀಡಿದರು. ಪಾನಿಪುರಿ, ಗೊಬಿಮಂಚೂರಿ ಸಿದ್ಧಪಡಿಸಿದ ತಂಡ ದ್ವಿತೀಯ ಸ್ಥಾನ ಪಡೆಯಿತು.
ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ತರಹೇವಾರಿ ಖಾದ್ಯಗಳು, ಆಹಾರ ಪದಾರ್ಥಗಳು ನೋಡುಗರ ಬಾಯಲ್ಲಿ ನೀರೂರಿಸಿದವು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಳ್ಳಿ ಸೊಗಡಿನ ತಿಂಡಿ ಪ್ರದರ್ಶಿಸಿದರೆ, ನಗರದ ವಿದ್ಯಾರ್ಥಿಗಳು ಕುರುಕಲು ಆಹಾರಗಳನ್ನಿಟ್ಟು ಮನಗೆದ್ದರು.
ಆಹಾರೋತ್ಸವದಲ್ಲಿ 11 ಮಳಿಗೆ ಹಾಕಲಾಗಿತ್ತು. ವಿವಿಧ ರೀತಿಯ ಸಿಹಿ ತಿಂಡಿ, ಗೋಬಿ ಮಂಚೂರಿ, ಹೋಳಿಗೆ, ಪಕೋಡಾ, ರಾಗಿ ಮುದ್ದೆ ಸಾರು, ಮಿರ್ಚಿ ಮಂಡಕ್ಕಿ, ಕಾಫಿ, ಚಹಾ, ಮೈಸೂರು ಪಾಕ್, ಪಾಯಸ, ವೆಜ್ ಪಲಾವ್, ಟೋಮ್ಯಾಟೋ ರೈಸ್, ಪೇಪರ್ ಅವಲಕ್ಕಿ, ಪಾನಿಪುರಿ, ಚಪಾತಿ, ಬೋಂಡಾ, ಸಮೋಸಾ ಮತ್ತಿತರ ತಿಂಡಿಗಳಿಗೆ ದರ ನಿಗದಿಪಡಿಸಿ ವ್ಯಾಪಾರ ಮಾಡಿದರು.
ತಹಸೀಲ್ದಾರ್ ಶಿವಕುಮಾರ್ ಅವರು ಆಹಾರ ಮೇಳಕ್ಕೆ ಚಾಲನೆ ನೀಡಿ, ರಾಗಿ ಮುದ್ದೆ ಸಾರು ರುಚಿ ಸವಿದರು. ನಿರೀಕ್ಷೆ ಮೀರಿ ಮಾರಾಟ ಮಾಡಿದ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸ ಕಂಡುಬಂತು.
ತಾಪಂ. ಇಒ. ಈಶ್ವರ್‌ಪ್ರಸಾದ್, ಉಪ ತಹಸೀಲ್ದಾರ್ ತಿಪ್ಪೇಸ್ವಾಮಿ, ಪ್ರಾಚಾರ್ಯ ಡಾ.ಡಿ.ಧರಣೀಂದ್ರಯ್ಯ, ಅಂಬೇಡ್ಕರ್ ಕಾಲೇಜಿನ ಪ್ರಾಚಾರ್ಯ ಬಿ.ಪಿ.ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ತಿಪ್ಪೇಸ್ವಾಮಿ, ಡಾ.ಸಿದ್ದಲಿಂಗಯ್ಯ ಇತರರಿದ್ದರು. ವಿದ್ಯಾರ್ಥಿ ತಂಡದ ನಾಯಕರಾದ ಕಲಾವತಿ, ಸುನಿತಾ, ಜಮುನ, ಭರತ್ ನಾಯ್ಕ, ಸರಸ್ವತಿ, ಶ್ರೀದೇವಿ, ಯಶೋಧರ, ಭವ್ಯಾ, ಶೈಲಾ, ಗಿರಿಜಶಂಕರ ಭಾಗವಹಿಸಿದ್ದರು.