ಜಿಲ್ಲೆ

ರಸ್ತೆಯಲ್ಲಿ ಉಡಾಫೆ ಪ್ರವೃತ್ತಿ ಪ್ರದರ್ಶಿಸಿದರೆ ಕಠಿಣ ಕ್ರಮ

ಹಿರಿಯೂರು: ದ್ವಿಚಕ್ರ ವಾಹನ ಸವಾರರು ರಸ್ತೆ ಮೇಲೆ ಉಡಾಫೆ ಪ್ರವೃತ್ತಿ ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಚನ್ನೇಗೌಡ ಎಚ್ಚರಿಕೆ ನೀಡಿದರು.

ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಅತಿ ವೇಗದ ಚಾಲನೆ, ಕುಡಿದು ವಾಹನ ಓಡಿಸುವುದು, ಸಮರ್ಪಕ ತರಬೇತಿ ಕೊರತೆಯಿಂದ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಯುವ ಸಮೂಹ ಜಾಗೃತಗೊಳ್ಳಬೇಕು ಎಂದರು.

ನಗರ ಪೊಲೀಸ್ ಠಾಣೆ ಪಿಎಸ್‌ಐ ನಾಗರಾಜ್ ಮಾತನಾಡಿ, ನಗರದಲ್ಲಿ ರಸ್ತೆ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬೇಕಾಬಿಟ್ಟಿ ವಾಹನ ಚಾಲನೆ ಮಾಡಿದರೆ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದರು.

ನಾಗರಿಕ ಕೇಶವಮೂರ್ತಿ ಮಾತನಾಡಿ, ಕಿರಿದಾದ ರಸ್ತೆಗಳು, ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ವಿಸ್ತರಣೆ ವಿಳಂಬ, ಮಿತಿ ಮೀರಿದ ವಾಹನಗಳಿಂದ ಪಾದಚಾರಿಗಳು ಸುರಕ್ಷತೆ ಇಲ್ಲವಾಗಿದೆ. ವಾಹನ ಸಂಖ್ಯೆ ಹೆಚ್ಚಳದಿಂದ ವಾಯು-ಶಬ್ದ ಮಾಲಿನ್ಯ ಹೆಚ್ಚಾಗಿ ಜನರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ತಿಳಿಸಿದರು.

ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ವಿಧಿಸಿ, ಜೀವರಕ್ಷಕ ಹೆಲ್ಮೆಟ್ ಧರಿಸುವುದು, ರಸ್ತೆ ನಿಯಮ ಪಾಲಿಸುವಂತೆ ಮನವರಿಕೆ ಮಾಡಿ ಗುಲಾಬಿ ಹೂ ನೀಡಲಾಯಿತು. ಬಳಿಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬೈಕ್ ಜಾಥಾ ನಡೆಸಿ ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಪಿಎಸ್‌ಐ ಅನುಸೂಯಮ್ಮ, ಪರಮೇಶ್, ಪ್ರಭಾಕರ್ ರೆಡ್ಡಿ, ವಸಂತ್, ತಿಮ್ಮರಾಯಪ್ಪ, ಸಿದ್ದಲಿಂಗ, ಪ್ರವೀಣ್, ನಾಗರಾಜ್, ತಿಪ್ಪೇಸ್ವಾಮಿ, ಶ್ರೀನಿವಾಸ್, ಅಜಿತ್ ಕುಮಾರ್ ಇತರರಿದ್ದರು.