ಜಿಲ್ಲೆ

ಹೂವಿನಹೊಳೇಲಿ ಕರೊನಾ ಭೀತಿ ಇಲ್ಲ

ಹಿರಿಯೂರು: ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಕರೊನಾ ವೈರಸ್ ಸೋಂಕಿನಿಂದ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ತಾಲೂಕಿನ ಹೂವಿನಹೊಳೆ ಗ್ರಾಮದ ನಾಲ್ವರು ಪಾಲ್ಗೊಂಡಿರುವುದು ಸುಳ್ಳು ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆ ಪಿಎಸ್‌ಐ ಚಂದ್ರಶೇಖರ್ ತಿಳಿಸಿದ್ದಾರೆ.

ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿದ ತಕ್ಷಣ ಎಚ್ಚೆತ್ತುಕೊಂಡ ತಾಲೂಕು ಆಡಳಿತ, ಆರೋಗ್ಯ-ಪೊಲೀಸ್ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುಳ್ಳು ಸುದ್ದಿ ಹರಡಲಾಗಿದೆ ಎಂಬುದನ್ನು ಖಚಿತ ಪಡಿಸಿಕೊಂಡರು.

ಮುಂಜಾಗ್ರತಾ ಕ್ರಮವಾಗಿ ಒಬ್ಬ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿ, ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮಕ್ಕೆ ಹೊರಗಿನವರು ಪ್ರವೇಶಿಸದಂತೆ ದಿಗ್ಬಂದನ ಹಾಕಲಾಗಿದೆ.

ಸ್ಪಷ್ಟನೆ: ಶಿರಾದಲ್ಲಿ ಕರೊನಾ ವೈರಸ್ ಸೋಂಕಿನಿಂದ ಮೃತ ವ್ಯಕ್ತಿಗೂ ಹೂವಿನಹೊಳೆ ಗ್ರಾಮದ ನಾಲ್ವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಸದ್ಯ ನಾಲ್ಕು ಜನ ಆರೋಗ್ಯವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.