ಹಿರಿಯೂರು: ಕರೊನಾ ವೈರಸ್ ನೆಪದಲ್ಲಿ ಗ್ರಾಮಕ್ಕೆ ಹೊರಗಿನವರು ಪ್ರವೇಶಿಸಿದಂತೆ ಬೇಲಿ ಹಾಕಿದರೆ, ಕೆಲವರು ಇದನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.
ತಾಲೂಕಿನ ಗಡಿ ಗ್ರಾಮಗಳಲ್ಲಿ ಮದ್ಯ ಮಾರಾಟ, ಜೂಜು ಎಗ್ಗಿಲ್ಲದೆ ನಡೆಯುತ್ತಿದ್ದು, ಕೆಲವೆಡೆ ಪೊಲೀಸರು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಪೊಲೀಸರನ್ನು ಗ್ರಾಮಕ್ಕೆ ಪ್ರವೇಶಿಸದಂತೆ ತಡೆಯಲು ಜೂಜುಕೋರರ ತಂಡ ಗ್ರಾಮದ ಸಂಪರ್ಕ ರಸ್ತೆಗಳಿಗೆ ಬೇಲಿ ಹಾಕಿ, ಜೂಜು-ಮದ್ಯ ಮಾರಾಟ ಮಾಡಲಾಗುತ್ತಿದೆ.
ಬೇಲಿ ತೆರವಿಗೆ ಆದೇಶ: ಕೆಲವರು ಕರೊನಾ ನೆಪದಲ್ಲಿ ಅನವಶ್ಯಕವಾಗಿ ಬೇಲಿ ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡುತ್ತಿದ್ದು, ತಕ್ಷಣ ತೆರವುಗೊಳಿಸದಿದ್ದರೆ ಕ್ರಮಕೈಗೊಳ್ಳುವುದಾಗಿ ತಾಲೂಕು ಆಡಳಿತ ಎಚ್ಚರಿಸಿದೆ.
ಆಂಬ್ಯುಲೆನ್ಸ್ ಪರದಾಟ: ತಾಲೂಕಿನ ಮದ್ದಿಹಳ್ಳಿ ಗ್ರಾಮದ ಬಳಿ ರಸ್ತೆಗೆ ಬೇಲಿ ಹಾಕಿದ್ದರಿಂದ ತಾಯಿ-ಮಗು ಕರೆ ತಂದ ಆಂಬ್ಯುಲೆನ್ಸ್ ವಾಹನ ಗಂಟೆಗಟ್ಟಲೆ ರಸ್ತೆಯಲ್ಲಿ ನಿಂತು ಪರದಾಡುವಂತಾಯಿತು. ಸ್ಥಳದಲ್ಲಿದ್ದ ಕುರಿಗಾಹಿಗಳು ಬೇಲಿ ತೆರವುಗೊಳಿಸಿ ಆಂಬ್ಯುಲೆನ್ಸ್ ಮುಂದೆ ಸಾಗಲು ಅವಕಾಶ ಮಾಡಿಕೊಟ್ಟರು.