ಜಿಲ್ಲೆ

ಕೆರೆಗಳಿಗೆ ನೀರು ತುಂಬಿಸುವ ಗುರಿ

Chitradurga

ಹಿರಿಯೂರು: ತಾಲೂಕಿನ ನೀರಾವರಿ ವಿಚಾರದಲ್ಲಿ ರೈತರ ಹಿತವೇ ಮುಖ್ಯವಾಗಿದ್ದು, ಹಂತ ಹಂತವಾಗಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು.

ತಾಲೂಕಿನ ಕಸವನಹಳ್ಳಿ ಬ್ಯಾರೇಜ್‌ಗೆ ಗುರುವಾರ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿವಿ ಸಾಗರ ಜಲಾಶಯದಿಂದ ಸುವರ್ಣಮುಖಿ, ಕಸವನಹಳ್ಳಿ, ಸಮುದ್ರದಹಳ್ಳಿ, ಯಳನಾಡು ಭಾಗಕ್ಕೆ ನೀರು ಹರಿಸುವಂತೆ ನದಿಪಾತ್ರದ ರೈತರು ದಶಕದಿಂದ ಹೋರಾಟ ನಡೆಸಿದ್ದು, ಇದೀಗ ಅದು ಸಾರ್ಥಕವಾಗಿದೆ ಎಂದರು.

ಬ್ಯಾರೇಜ್ ತುಂಬಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜನ-ಜಾನುವಾರುಗಳ ಕುಡಿವ ನೀರಿನ ಬವಣೆ ದೂರಾಗಲಿದೆ. ತಾಲೂಕಿನ ಲಭ್ಯ ಜಲಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಸಮಗ್ರ ನೀರಾವರಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಇಚ್ಛಾಶಕ್ತಿ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ಸಿಕ್ಕಿದ್ದು, ವಿವಿ ಸಾಗರಕ್ಕೆ 10 ಟಿಎಂಸಿ ಅಡಿ ನೀರು ಲಭ್ಯವಾಗುವ ವಿಶ್ವಾಸವಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ಮಂಡಲ ಅಧ್ಯಕ್ಷ ವಿಶ್ವನಾಥ್, ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ಆಲೂರು ಶಿವಕುಮಾರ್, ಎಚ್.ಆರ್.ತಿಮ್ಮಯ್ಯ ಇತರರಿದ್ದರು.

ಶಾಸಕರ ಇಚ್ಛಾಶಕ್ತಿಯ ಫಲವಾಗಿ ವಿವಿ ಸಾಗರದ ನೀರನ್ನು ಸುವರ್ಣಮುಖಿ ನದಿಗೆ ಹರಿಸಿದ್ದು, ನದಿ ಪಾತ್ರದಲ್ಲಿ ಜೀವಕಳೆ ಬಂದಿದೆ. ವರ್ಷ ಪೂರ್ತಿ ಕೃಷಿ ಚಟುವಟಿಕೆಗೆ ವರದಾನವಾಗಲಿದೆ.
> ವಿಶ್ವನಾಥ್ ಬಿಜೆಪಿ ಮಂಡಲ ಅಧ್ಯಕ್ಷ