ಹಿರಿಯೂರು: ದೇಶದಲ್ಲಿ ಕರೊನಾ ವೈರಸ್ ತಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಬೆಂಬಲಿಸಲು ತಾಲೂಕು ಆಡಳಿತ ಸಜ್ಜಾಗಿದೆ.
ಆರೋಗ್ಯ ಇಲಾಖೆ, ನಗರಸಭೆ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ಬೆಸ್ಕಾಂ ಸಹಯೋಗದಲ್ಲಿ ಕರೊನಾ ಹರಡದಂತೆ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ, ಜನರಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗಿದೆ.
ವಾರದ ಸಂತೆ ರದ್ದು: ಜಿಲ್ಲಾಧಿಕಾರಿಗಳ ಆದೇಶದನ್ವಯ ಜಿಲ್ಲೆಯಲ್ಲಿ 144 ಸೆಕ್ಷೆನ್ ಜಾರಿಯಲ್ಲಿರುವ ಕಾರಣ ಶನಿವಾರದ ಸಂತೆ ರದ್ದು ಪಡಿಸಲಾಯಿತು. ಗ್ರಾಮೀಣ ಭಾಗದಿಂದ ತರಕಾರಿ ಮಾರಾಟಕ್ಕೆ ಆಗಮಿಸಿದ್ದ ರೈತರು ಸಂತೆ ರದ್ದಾಗಿರುವ ಸುದ್ದಿ ಕೇಳಿ, ಪುಟ್‌ಪಾತ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ತಮ್ಮ ಊರುಗಳತ್ತ ತೆರಳಿದರು.
ತಾಲೂಕಿನ ಪ್ರಮುಖ ಪ್ರವಾಸಿ ತಾಣ ವಿವಿ ಸಾಗರ ಜಲಾಶಯದ ಬಳಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಪುಟ್‌ಪಾತ್ ವ್ಯಾಪಾರಕ್ಕೆ ಅಡ್ಡಿ ಇಲ್ಲ: ಯುಗಾದಿ ಹಬ್ಬದ ಪ್ರಯುಕ್ತ ನಗರದಲ್ಲಿ ಪುಟ್‌ಪಾತ್ ವ್ಯಾಪಾರ ಜೋರಾಗಿತ್ತು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಜನರು ತರಕಾರಿ, ದಿನ ನಿತ್ಯ ಬಳಕೆ ವಸ್ತುಗಳು, ಹೊಸ ಬಟ್ಟೆ ಖರೀದಿಸಿದರು. ಒಂದೇ ಕಡೆ ಐದು ಜನ ಸೇರುವಂತಿಲ್ಲ ಎಂಬ ಜಿಲ್ಲಾಡಳಿತದ ಆದೇಶದ ಮಧ್ಯೆಯೂ ಬೀದಿಬದಿ ಸಾವಿರಾರು ಮಂದಿ ಖರೀದಿಯಲ್ಲಿ ತೊಡಗಿದ್ದರು. ಭಾನುವಾರ ಜನತಾ ಕರ್ಫ್ಯೂ ಕಾರಣ ಶನಿವಾರವೇ ಹಬ್ಬಕ್ಕೆ ಅಗತ್ಯವಾದ ದಿನಸಿ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು.