ಜಿಲ್ಲೆ

ಹಿರಿಯೂರನ್ನು ಬರಪೀಡಿತ ತಾಲೂಕಾಗಿ ಘೋಷಿಸಿ

Chitradurga

ಹಿರಿಯೂರು: ತಾಲೂಕನ್ನು ಬರ ಪೀಡಿತ ಪಟ್ಟಿಗೆ ಸೇರಿಸಬೇಕು ಮತ್ತು ಕಡಲೆ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹಿಸಿ ಮಂಗಳವಾರ ರೈತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಉಳಿದೆಲ್ಲ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದರೆ, ಹಿರಿಯೂರನ್ನು ಕೈ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಆದೇಶಕ್ಕೂ ಕಿಮ್ಮತ್ತಿಲ್ಲ: ಸರ್ಕಾರ 27 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಾಗಲೇ ಹಿರಿಯೂರನ್ನು ಬರ ಪಟ್ಟಿಗೆ ಸೇರಿಸುವಂತೆ ಸಿಎಂ ಬಿಎಸ್‌ವೈಗೆ ಸ್ಥಳೀಯ ಶಾಸಕರು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸಿಎಂ, 2 ನೇ ಹಂತದ ಬರಪಟ್ಟಿಗೆ ಸೇರಿಸಲು ಆದೇಶ ಮಾಡಿದ್ದರು. ಈಗ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ರೈತರು ದೂರಿದ್ದಾರೆ.

ಅವೈಜ್ಞಾನಿಕ ವರದಿ: ಕಳೆದ ವರ್ಷ ತಾಲೂಕಿನಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಶೇ.50 ಕ್ಕೂ ಕಡಿಮೆ ಬಿತ್ತನೆಯಾಗಿದ್ದ ಬೆಳೆ ಸಂಪೂರ್ಣ ಹಾನಿಗೊಳಗಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಸರ್ಕಾರಕ್ಕೆ ಅವೈಜ್ಞಾನಿಕ ವರದಿ ಸಲ್ಲಿಸಿದೆ ಎಂದು ಆರೋಪಿಸಿದರು.

ಕಡಲೆ ಖರೀದಿ ಕೇಂದ್ರಕ್ಕೆ ಒತ್ತಾಯ: ತಾಲೂಕಿನಲ್ಲಿ 10-12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಕಡಲೆ ಕಟಾವಿಗೆ ಬಂದಿದೆ. ಹೀಗಾಗಿ ಹಿರಿಯೂರಿನಲ್ಲಿ ಶೀಘ್ರವೇ ಕಡಲೆ ಖರೀದಿ ಕೇಂದ್ರ ತೆರೆದು ಕನಿಷ್ಠ 4500-5000 ರೂ. ಬೆಂಬಲ ಬೆಲೆ ಘೋಷಿಸಬೇಕೆಂದು ತಾಪಂ ಸದಸ್ಯ ಯಶವಂತರಾಜು ಒತ್ತಾಯಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ತಾಪಂ ಮಾಜಿ ಅಧ್ಯಕ್ಷ ತಿಪ್ಪೀರಣ್ಣ, ಜಿಪಂ ಸದಸ್ಯೆ ರಾಜೇಶ್ವರಿ, ಬಿಜೆಪಿ ಮುಖಂಡ ದ್ಯಾಮಣ್ಣ, ನಗರಸಭೆ ಸದಸ್ಯೆ ಶಿವರಂಜನಿ, ರೈತ ಮುಖಂಡರಾದ ತಿಪ್ಪೇಸ್ವಾಮಿ, ನಾಗಪ್ಪ, ಶ್ರೀಧರ್, ಏಕಾಂತಪ್ಪ, ಮಹೇಶ್, ಅರವಿಂದ್, ಶಿವಶಂಕರಪ್ಪ, ತಿಮ್ಮಣ್ಣ, ರಂಗಪ್ಪ ಇತರರಿದ್ದರು.