ಜಿಲ್ಲೆ

ಹಿರಿಯೂರಲ್ಲಿ ನೀರಿಗೆ ಹಾಹಾಕಾರ

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ತಾಲೂಕಿನ ವಿವಿಧೆಡೆ ಕುಡಿವ ನೀರಿನ ಅಭಾವ ಎದುರಾಗಿದೆ. ಜನ- ಜಾನುವಾರು ನೀರಿಗೂ ಪರಿತಪಿಸುವಂತಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆಬಾವಿ ಬತ್ತಿವೆ. 22 ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ.

ವಿವಿ ಸಾಗರ- ಗಾಯತ್ರಿ ಜಲಾಶಯದ ನೀರನ್ನು ಸದ್ಬಳಕೆ ಮಾಡಿಕೊಂಡಿದ್ದರೆ ಇಂದು ತಾಲೂಕಿನ ಎಲ್ಲ ಹಳ್ಳಿಗಳಿಗೂ ಶಾಶ್ವತ ಕುಡಿವ ನೀರು ಲಭ್ಯವಾಗುತ್ತಿತ್ತು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಧರ್ಮಪುರ-ಐಮಂಗಲ ಹೋಬಳಿಗೆ ಯಾವುದೇ ಶಾಶ್ವತ ನೀರಾವರಿ ಲಭಿಸಿಲ್ಲ.

ಬರ ಪರಿಸ್ಥಿತಿ, ಬೇಸಿಗೆಯಲ್ಲಿ ತಾತ್ಕಾಲಿಕ ಎಂಬಂತೆ ಹಳ್ಳಿಗಳಲ್ಲಿ ಕೊಳವೆಬಾವಿ ಕೊರೆಸಿ ಕುಡಿವ ನೀರು ಪೂರೈಸುತ್ತಿದ್ದು, ಜಲ ಮೂಲಗಳ ಸಂರಕ್ಷಣೆ ಕೇವಲ ಘೋಷಣೆಗೆ ಸೀಮಿತವಾಗಿದೆ.

46 ಆರ್‌ಒ ಪ್ಲಾಂಟ್ ಸ್ಥಗಿತ: ತಾಲೂಕಿನಲ್ಲಿ 213 ಶುದ್ಧ ಕುಡಿವ ನೀರಿನ ಘಟಕಗಳಿವೆ. ಈ ಪೈಕಿ ಯಂತ್ರಗಳ ದೋಷದಿಂದ 46 ಸ್ಥಗಿತವಾಗಿವೆ. 145 ಆರ್‌ಒ ಪ್ಲಾಂಟ್ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ.

ಬಹು ಗ್ರಾಮ ನನೆಗುದಿಗೆ: ವಿವಿ ಸಾಗರ, ಗಾಯತ್ರಿ ಜಲಾಶಯದಿಂದ ಐಮಂಗಲ- ಜೆ.ಜಿ.ಹಳ್ಳಿ ಹೋಬಳಿಯ 75 ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ಕುಡಿವ ನೀರು ಒದಗಿಸುವ ಬಹು ಗ್ರಾಮ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಎರಡು ಹೋಬಳಿ ಜನತೆ ಜಲ ಸಂಜೀವಿನಿಗೆ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

ಜಲಪಾತ್ರೆಗಳು ಖಾಲಿ ಖಾಲಿ: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 38, ಜಿಪಂ ವ್ಯಾಪ್ತಿಯಲ್ಲಿ 15 ಕೆರೆಗಳಿವೆ. ಮಳೆ ಕೊರತೆಯಿಂದ ಬಹುತೇಕ ಒಣಗಿವೆ. ಗ್ರಾಮೀಣ ಭಾಗದಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದೆ. 1500 ಅಡಿ ಕೊರೆದರೂ ನೀರು ಲಭ್ಯವಿಲ್ಲ. ವಿವಿ ಸಾಗರ ಜಲಾಶಯ ದಿಂದ ಎಡ-ಬಲ ದಂಡೆ ನಾಲೆಗಳಿಗೆ ನೀರು ಹರಿಸಿದರೆ ನದಿಪಾತ್ರದ ಹಳ್ಳಿಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಆಗುವುದಿಲ್ಲ.

ಸಮಸ್ಯಾತ್ಮಕ ಹಳ್ಳಿಗಳು: ಹರಿಯಬ್ಬೆ ಪಾಳ್ಯ, ಗೂಳ್ಯ, ಮುಂಗಸವಳ್ಳಿ, ಚಂದ್ರಗಿರಿ, ಕಾರೋಬಯ್ಯನಹಟ್ಟಿ, ಬುರುಜನರೊಪ್ಪ, ಹೊಸ ನಾಯಕರಹಟ್ಟಿ, ಪಾಲವ್ವನಹಳ್ಳಿ, ಕೋವೇರಹಟ್ಟಿ, ಚಿಕ್ಕಸಿದ್ದವ್ವನಹಳ್ಳಿ, ಧರ್ಮಪುರ, ಶ್ರವಣಗೆರೆ, ಹುಚ್ಚವ್ವನಹಳ್ಳಿ, ಆರ್.ಎಸ್.ಉಪ್ಪಾರಹಟ್ಟಿ, ಉಪ್ಪಾಳಗೆರೆ, ಕಾರ್ತಿಕೇನಹಳ್ಳಿ, ಕಂದಿಕೆರೆ, ಕಳವೀಬಾಗಿ, ಬುಳ್ಳಜ್ಜನಹಟ್ಟಿ ಗ್ರಾಮದಲ್ಲಿ ಮುಂಬರುವ ದಿನದಲ್ಲಿ ಕುಡಿವ ನೀರಿಗೆ ತೀವ್ರ ಸಮಸ್ಯೆಯಾಗಲಿದೆ.

ಮೋಟರ್ ಪಂಪ್ ಸಮಸ್ಯೆ: ವಿವಿ ಸಾಗರ ಜಲಾಶಯದ ಪಂಪ್‌ಹೌಸ್‌ನಲ್ಲಿ ಕುಡಿವ ನೀರು ಪೂರೈಕೆ ಮಾಡುವ ಎರಡು ಮೋಟರ್ ಪಂಪ್ ತಾಂತ್ರಿಕ ತೊಂದರೆಯಿಂದ ಹಿರಿಯೂರು ನಗರಕ್ಕೆ ಐದು ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ಲಾಕ್‌ಡೌನ್ ನಿಂದ ದುರಸ್ತಿ ಕಾರ್ಯ ವಿಳಂಬವಾಗಿದ್ದು, ಒಂದೇ ಮೋಟರ್‌ನಲ್ಲಿ ನೀರು ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ನಗರಕ್ಕೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ.

ಶಾಸಕಿ ಕೆ.ಪೂರ್ಣಿಮಾ ಹೇಳಿಕೆ: ಮುಂದಿನ ಮೂರು ವರ್ಷದಲ್ಲಿ ತಾಲೂಕಿನ ಎಲ್ಲ ಹಳ್ಳಿಗಳಿಗೂ ಶಾಶ್ವತ ಕುಡಿವ ನೀರು ಒದಗಿಸಲು ಯೋಜನೆ ರೂಪಿಸಿದ್ದು ಬೇಸಿಗೆ ವೇಳೆ ಜನ- ಜಾನುವಾರುಗಳ ಕುಡಿವ ನೀರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಸೂಚಿಸಲಾಗಿದೆ.

ಗ್ರಾಮೀಣ ಕುಡಿವ ನೀರು ಸರಬರಾಜು ಉಪ ವಿಭಾಗ ಎಇಇ ರಾಮಚಂದ್ರನಾಯ್ಕ ಹೇಳಿಕೆ: ಹಿರಿಯೂರು ತಾಲೂಕಿನ 22 ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಸೃಷ್ಟಿಯಾಗುವ ಅಂದಾಜಿದೆ. ಶುದ್ಧ ಕುಡಿವ ನೀರಿನ ಘಟಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.