ಹಿರಿಯೂರು: ವೇದಾವತಿ ನದಿ ಪಾತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ಬಿದರಕೆರೆ, ಮುಂಗಸವಳ್ಳಿ, ಹೂವಿನಹೊಳೆ ಗ್ರಾಮದ ವೇದಾವತಿ ನದಿ ಪಾತ್ರದಲ್ಲಿ ಸರ್ಕಾರದ ನಿಯಮ ಗಾಳಿಗೆ ತೂರಿ ಮರಳು ದಂಧೆ ನಡೆಸುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
15-20 ಅಡಿ ಆಳದಲ್ಲಿ ಮರಳು ಗಣಿಗಾರಿಕೆ ನಡೆಸಿ ನದಿ ಪಾತ್ರದ ಚಿತ್ರಣವೇ ಬದಲಿಸಿದ್ದಾರೆ. ನಿತ್ಯ ಅಕ್ರಮವಾಗಿ ನೂರಾರು ಲೋಡ್ ಮರಳನ್ನು ಸಾಗಿಸಲಾಗುತ್ತಿದೆ. ಮರಳು ಯಾರ್ಡ್‌ಗಳಲ್ಲಿ ಅಕ್ರಮವಾಗಿ ಎರಡು ಲಕ್ಷ ಟನ್ ಮರಳು ಸಂಗ್ರಹಿಸಿಲಾಗಿದೆ ಎಂದು ದೂರಿದರು.
ಗ್ರಾಮೀಣ ಭಾಗದ ಜನತೆ ವಸತಿ, ಶೌಚಗೃಹ ನಿರ್ಮಾಣಕ್ಕೆ ಎತ್ತಿನಬಂಡಿಯಲ್ಲಿ ಮರಳು ಸಾಗಿಸಿದರೆ ಪ್ರಕರಣ ದಾಖಲಿಸಲಾಗುತ್ತಿದೆ. ಗುತ್ತಿಗೆದಾರರು ಸರ್ಕಾರಕ್ಕೆ ವಂಚಿಸಿ ಮರಳು ಲೂಟಿ ಮಾಡುತ್ತಿದ್ದರು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ರೈತ ಮುಖಂಡರಾದ ಸಿದ್ದರಾಮಣ್ಣ, ಶಿವಕುಮಾರ್, ಲಕ್ಷ್ಮೀಕಾಂತ್, ಶ್ರೀನಿವಾಸ್, ತಿಪ್ಪೇಸ್ವಾಮಿ, ವಿರೂಪಾಕ್ಷಪ್ಪ, ರವೀಶ್ ಇತರರಿದ್ದರು.