ಜಿಲ್ಲೆ

ಕರೆಂಟ್ ಸಂಪರ್ಕಕ್ಕೆ ಲಂಚ ಆರೋಪ

Chitradurga

ಹಿರಿಯೂರು: ಅಕ್ರಮ ಸಕ್ರಮ ಯೋಜನೆಯಡಿ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಕೆಲ ಅಧಿಕಾರಿಗಳು ರೈತರಿಂದ ಸಾವಿರಾರು ರೂಪಾಯಿ ಲಂಚ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಬೆಸ್ಕಾಂ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿತು.

ಕಾರ್ಯಪಾಲಕ ಇಂಜಿನಿಯರ್ ಕುಲ್ಮೆ ಮಹಮದ್ ಸಾಹೇಬ್ ಮಾತನಾಡಿ, ರೈತರು ಐಪಿ ಸೆಟ್‌ಗಳ ಸಕ್ರಮಕ್ಕೆ ಹಣ ಕೊಡಬಾರದು ಎಂದು ಕರಪತ್ರದ ಮೂಲಕ ಹಲವು ಬಾರಿ ಮನವಿ ಮಾಡಿದ್ದೇವೆ ಎಂದರು.

ಬೆರಳೆಣಿಕೆಯಷ್ಟು ಪ್ರಕರಣ ಹೊರತುಪಡಿಸಿ ಜೇಷ್ಠತೆ ಆಧರಿಸಿ ಸಂಪರ್ಕ ಕೊಡಲಾಗುತ್ತಿದೆ. ನಮ್ಮ ಅಧಿಕಾರಿಗಳಿಂದ ಲೋಪ ಆಗಿದೆಯೇ ಇಲ್ಲವೇ ಎಂಬುದಕ್ಕೆ, 2014ರಿಂದ ಅಕ್ರಮ-ಸಕ್ರಮ ಯೋಜನೆಗೆ ಬಂದಿರುವ ಅರ್ಜಿಗಳು, ನೋಂದಣಿ ದಿನಾಂಕ, ಕಾರ್ಯಾದೇಶ ನೀಡಿದ ದಿನಾಂಕ, ಕಾಮಗಾರಿ ಪೂರ್ಣಗೊಂಡಿರುವುದು ಅಥವಾ ಪ್ರಗತಿಯಲ್ಲಿರುವುದರ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇನೆ. ಲೋಪ ಕಂಡುಬಂದಲ್ಲಿ ತನಿಖೆ ಮಾಡಿಸಲು ಹಿಂದೇಟು ಹಾಕುವುದಿಲ್ಲ ಎಂದು ಸಾಹೇಬ್ ಸ್ಪಷ್ಟಪಡಿಸಿದರು.

2014ರಿಂದ 2020 ಮೇ ಅಂತ್ಯದವರೆಗೆ 2289 ಅರ್ಜಿಗಳು ಬಂದಿವೆ. 1702 ಪೂರ್ಣಗೊಂಡಿದ್ದು, 339 ಪ್ರಗತಿಯಲ್ಲಿವೆ. ಸರ್ಕಾರದಿಂದ ಅಕ್ರಮ-ಸಕ್ರಮ ಯೋಜನೆಗೆ 144 ಕೋಟಿ ರೂಪಾಯಿ ಬಂದಿದ್ದು, ಇನ್ನೂ 40 ಕೋಟಿ ರೂ. ಅನುದಾನ ನಮ್ಮಲ್ಲಿದೆ. ರೈತರು ಈಗಲೂ ಅರ್ಜಿ ಸಲ್ಲಿಸಿ ಹಣ ಪಾವತಿಸಿದರೆ ಸಕ್ರಮಗೊಳಿಸುತ್ತೇವೆ. ನವೆಂಬರ್ ಒಳಗೆ ಹಣ ಬಳಸದಿದ್ದರೆ ಸರ್ಕಾರಕ್ಕೆ ಮರಳಿ ಹೋಗುತ್ತದೆ. ನಮ್ಮ ಕೆಳಹಂತದ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಲ್ಲಿ, ಕಾಮಗಾರಿ ನಡೆಸಲು ವಿಳಂಬ ಮಾಡಿದ್ದಲ್ಲಿ ನನ್ನ ಗಮನಕ್ಕೆ ತನ್ನಿ. ನಮ್ಮ ತಾಲೂಕಿನಲ್ಲಿ ಇನ್ನೂ 2000 ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ರೈತರಿಂದ ಪಡೆದಿರುವ ಲಂಚದ ಹಣವನ್ನು ಮರಳಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬೆಸ್ಕಾಂ ಇಲಾಖೆ ಮುಖ್ಯ ಇಂಜಿನಿಯರ್ ಸಮಕ್ಷಮದಲ್ಲಿ ಫಲಾನುಭವಿ ರೈತರ ಸಭೆ ನಡೆಸಬೇಕು ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.

ರೈತ ಮುಖಂಡರಾದ ಸಿ.ಸಿದ್ದರಾಮಣ್ಣ, ದಸ್ತಗೀರ್ ಸಾಬ್, ತಿಮ್ಮಾರೆಡ್ಡಿ, ಸಿದ್ದಪ್ಪ, ವಿರೂಪಾಕ್ಷಪ್ಪ, ಬೆಸ್ಕಾಂ ಇಲಾಖೆ ಸಹಾಯಕ ಎಂಜಿನಿಯರ್ ಪೀರ್ ಸಾಬ್, ಲೆಕ್ಕಾಧಿಕಾರಿ ಪ್ರಭುದೇವ್ ಇದ್ದರು.