ಜಿಲ್ಲೆ

ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಸಾಧ್ಯತೆ

Chitradurga

ಹಿರಿಯೂರು: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದ್ದು, ದೊರೆಯುವ ಸಾಧ್ಯತೆ ಇದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಕಣಜನಹಳ್ಳಿ-ಹರಿಯಬ್ಬೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮುಂಬರುವ ಬಜೆಟ್‌ನಲ್ಲಿ ತಾಲೂಕಿಗೆ ಬಂಪರ್ ಕೊಡುಗೆ ಸಿಗುವ ವಿಶ್ವಾಸವಿದೆ. ಶಾಶ್ವತ ನೀರಾವರಿ ಯೋಜನೆ, ಕೃಷಿ, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಧರ್ಮಪುರ ಫೀಡರ್ ನಾಲೆ, ಕೆರೆಗಳಿಗೆ ನೀರು ತುಂಬಿಸುವುದು, ಒಕ್ಕಲಿಗ ಸಮುದಾಯ ಭವನಕ್ಕೆ ಅನುದಾನ, ಎಸ್ಸಿ-ಎಸ್ಟಿ ಕಾಲನಿಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಚುನವಾಣೆ ಪೂರ್ವದಿಂದಲೂ ತಾಲೂಕಿನ ಅನ್ನದಾತರ ಪರ ಕೆಲಸ ಮಾಡಿದ್ದು, ಕಳೆದ ಎರಡು ವರ್ಷ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿ, ವಿವಿ ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿಸಲು ಶಕ್ತಿ ಮೀರಿ ಶ್ರಮಿಸಲಾಗಿದೆ. ಮಾ.6ರಂದು ಮಾರಿಕಣಿವೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಜಿಲ್ಲೆಯ ಎಲ್ಲ ಮಠಾಧೀಶರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ತಾಪಂ ಸದಸ್ಯ ಶಿವಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್, ನಿವೃತ್ತ ಡೀನ್ ಎಂ.ಜಿ.ಗೋವಿಂದಯ್ಯ, ಹೆಂಜೇರಪ್ಪ, ಶಿವಮೂರ್ತಿ, ರಂಗನಾಥ್, ಗೋವಿಂದರಾಜ್, ತಿಮ್ಮರಾಜ್, ರವಿಶಂಕರ್, ಎಇಇ ಶ್ರೀನಿವಾಸ್, ನಾಗರಾಜ್ ರಾವ್, ಬೆನಕನಹಳ್ಳಿ ಶಿವಮೂರ್ತಿ, ತಿಪ್ಪೇಸ್ವಾಮಿ ಇತರರಿದ್ದರು.