ಜಿಲ್ಲೆ

ಜಮೀನುಗಳಿಗೆ ಮಾಜಿ ಸಚಿವರ ಭೇಟಿ

Chitradurga

ಹಿರಿಯೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮಾಜಿ ಸಚಿವ ಡಿ. ಸುಧಾಕರ್ ಮನವಿ ಮಾಡಿದರು.

ಬುಧವಾರ ತಾಲೂಕಿನ ವಿವಿಧೆಡೆ ಜಮೀನುಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಪರಿಶೀಲಿಸಿ, ರೈತರ ಸಂಕಷ್ಟ ಆಲಿಸಿದರು.

ತಾಲೂಕಿನ ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಾಕ್‌ಡೌನ್‌ನಿಂದ ಕೃಷಿ ಉತ್ಪನ್ನ ಸಾಗಣೆ ಮತ್ತು ಮಾರಾಟಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹಣ್ಣು, ತರಕಾರಿ, ಹೂ, ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ವಿರೋಧಪಕ್ಷವಾಗಿ ಕಾಂಗ್ರೆಸ್ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಕೃಷಿ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿಸಬೇಕು ಎಂದರು.

ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು ಮಾತನಾಡಿ, ಸರ್ಕಾರ ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಪಂ ಸದಸ್ಯ ಆರ್. ನಾಗೇಂದ್ರನಾಯ್ಕ, ತಾಪಂ ಸದಸ್ಯರಾದ ಜಯಲಕ್ಷ್ಮಿ, ಓಂಕಾರಪ್ಪ, ತಿಪ್ಪಮ್ಮ, ಅಪ್ಪಾಜಿ, ಮುಕುಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಮುಖಂಡರಾದ ಹೇಮಂತ್ ಕುಮಾರ್, ಪೃಥ್ವಿ, ಜ್ಯೋತಿ, ಪರಮೇಶ್ ಇತರರಿದ್ದರು.